ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬರಲು ಮುಸ್ಲಿಂ ಸಮುದಾಯ ದೊಡ್ಡ ಮಟ್ಟದ ಕೊಡುಗೆ ನೀಡಿದೆ. ಇದನ್ನು ಸ್ವತಃ ಕಾಂಗ್ರೇಸ್ ಮುಖಂಡರು ಹೇಳುತ್ತಾ ಬಂದಿದ್ದಾರೆ. ಆದರೆ ಮುಸ್ಲಿಂ ಸಮುದಾಯ ರಾಜಕೀಯ ಅಧಿಕಾರದಿಂದ ವಂಚಿತರಾಗುತ್ತಲೇ ಬಂದಿದೆ.
ಹಾವೇರಿ, ಬೀದರ, ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಲ್ಲಿ ಮುಸ್ಲಿಂರಿಗೆ ಟಿಕೇಟ್ ಕೊಡಬೇಕು ಎಂಬ ಆಗ್ರಹ ಕೇಳಿ ಬಂದಿತ್ತು. ಈ ಮೂರು ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳ ಹುಡುಕಾಟ ಆರಂಭಗೊಂಡಿತ್ತು. ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಮಾಜಿ ಸಂಸದ ಐ ಜಿ ಸನದಿಯವರ ಮಗ ಶಾಕೀರ ಸನದಿ ಹೆಸರು ಹೈಕಮಾಂಡಗೆ ತಲುಪಿತ್ತು. ಮುಸ್ಲಿಂ ಸಮುದಾಯ ಈ ಕ್ಷೇತ್ರದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಕಾರಣ ಶಾಕೀರ ಸನದಿ ಈ ಸಲ ಗೆಲವು ಸಾಧಿಸುತ್ತಾರೆ ಎನ್ನುವ ಚರ್ಚೆಗಳು ಕೇಳಿ ಬಂದಿದ್ದವು.
ರಾಜಕೀಯ ತಂತ್ರಗಾರಿಕೆಯಲ್ಲಿ ಹೆಸರು ಮಾಡಿರುವ ಸುನೀಲ್ ಕನಗೋಲು ತಂಡ ಸರ್ವೇ ನಡೆಸಿತ್ತು. ಆದರೆ ಗದಗ ಜಿಲ್ಲೆಯ ರಾಜಕಾರಣ ಇದರಲ್ಲಿ ಆಟ ಆಡಿದಂತೆ ಕಾಣಬರುತ್ತಿದ್ದು, ಶಾಕೀರ ಸನದಿಗೆ ಹುಡಾ ಅಧ್ಯಕ್ಷ ಸ್ಥಾನ ಕೊಟ್ಟು ಸಮಾಧಾನ ಪಡಿಸಿದೆ ಎಂದು ಮುಸ್ಲಿಂ ಸಮುದಾಯ ಮಾತನಾಡಿಕೊಳ್ಳುತ್ತಿದೆ. ಶಾಕೀರ ಸನದಿ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿ, ಪಕ್ಷ ಬಲಿಷ್ಟಗೊಳಿಸಿದ್ದರು.
ರಾಜ್ಯದ ಒಟ್ಟು 28 ಲೋಕಸಭಾ ಕ್ಷೇತ್ರಗಳಲ್ಲಿ ಹಾವೇರಿ, ಬೀದರ, ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯಕ್ಕೆ ಪ್ರಾತಿನಿದ್ಯ ಸಿಕ್ತು ಅನ್ನುವಷ್ಟರಲ್ಲಿ ಶಾಕೀರ ಸನದಿಗೆ ಟಿಕೇಟ್ ತಪ್ಪಿಸುವ ನಿಟ್ಟಿನಲ್ಲಿಯೇ ಈ ಆಟ ಆಡಲಾಗಿದೆ ಎಂದು ಹೇಳಲಾಗುತ್ತಿದೆ.





