ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನವನ್ನು ಒಂದು ವಾರಗಳ ಕಾಲ ವಿಸ್ತರಿಸಬೇಕೆಂದು ವಿರೋದ ಪಕ್ಷದ ನಾಯಕ ಆರ್ ಅಶೋಕ ಮನವಿ ಮಾಡಿದ್ದಾರೆ.
ಈ ಕುರಿತು ಸಭಾಧ್ಯಕ್ಷರಾದ ಯು ಟಿ ಖಾದರ ಅವರಿಗೆ ಪತ್ರ ಮುಖೇನ ಮನವಿ ಮಾಡಿದ್ದೇನೆ ಎಂದು ಆರ್ ಅಶೋಕ ಎಕ್ಸ್ ನಲ್ಲಿ ತಿಳಿಸಿದ್ದಾರೆ.

ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಮಾನ್ಯ ಸದಸ್ಯರು ಪ್ರಸ್ತಾಪ ಮಾಡಿರುವ ಹಲವು ಗಂಭೀರ ವಿಷಯಗಳಿಗೆ ಮುಖ್ಯಮಂತ್ರಿಗಳು ಮತ್ತು ಸಚಿವರು ಇನ್ನೂ ಉತ್ತರ ನೀಡಬೇಕಿದೆ.
ಇದರ ಜೊತೆಗೆ ರಾಜ್ಯದಲ್ಲಿ ಕುಸಿದಿರುವ ಕಾನೂನು ಸುವ್ಯವಸ್ಥೆ, ಸರ್ಕಾರದ ವಿವಿಧ ಇಲಾಖೆಗಳಲ್ಲಿ ಅನುದಾನ ಬಳಕೆಯ ಕಳಪೆ ಸಾಧನೆ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಚರ್ಚಿಸಲು ಮಾನ್ಯ ಸದಸ್ಯರುಗಳಿಗೆ ಇನ್ನೂ ಸಾಕಷ್ಟು ಸಮಯಾವಕಾಶದ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
ಈ ನಿಟ್ಟಿನಲ್ಲಿ ನನ್ನ ಮನವಿಯನ್ನು ಪರಿಗಣಿಸಿ, ಸನ್ಮಾನ್ಯ ಸಭಾಧ್ಯಕ್ಷರು ವಿಧಾನಮಂಡಲದ ಅಧಿವೇಶನವನ್ನು ಒಂದು ವಾರಗಳ ವಿಸ್ತರಣೆ ಮಾಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಆರ್ ಅಶೋಕ ತಿಳಿಸಿದ್ದಾರೆ.
ಈ ಮೊದಲೇ ತೀರ್ಮಾನಿಸಿದಂತೆ ಇದೇ ದಿನಾಂಕ 19 ರಂದು ಅಧಿವೇಶನ ಮುಗಿಯಲಿದೆ.





