ಹುಬ್ಬಳ್ಳಿ ಧಾರವಾಡ ಪೊಲೀಸರು ಡ್ರಗ್ಸ್ ಮುಕ್ತ ಅವಳಿ ನಗರ ಮಾಡಲು ನಿರಂತರ ಶ್ರಮ ಹಾಕುತ್ತಿದ್ದಾರೆ.
ಮಾದಕ ವ್ಯಸನಿಗಳ ಬೆನ್ನು ಬಿದ್ದಿರುವ ಪೊಲೀಸ್ ಆಯುಕ್ತ ಎನ್ ಶಶಿಕುಮಾರ ಮತ್ತವರ ತಂಡ, ಅವಳಿ ನಗರದಲ್ಲಿ 7 ನೇ ಬಾರಿ ವಿಶೇಷ ಕಾರ್ಯಾಚರಣೆ ನಡೆಸಿ, 1016 ಜನರ ಪರೀಕ್ಷೆ ಮಾಡಿಸಿದೆ.
ಪರೀಕ್ಷೆಯಲ್ಲಿ ದೃಢಪಟ್ಟ 143 ಜನ ಡ್ರಗ್ಸ್ ಬಳಕೆದಾರರ ವಿರುದ್ಧ 37 ಕೇಸುಗಳನ್ನು ಹಾಕಲಾಗಿದೆ.
ಹುಬ್ಬಳ್ಳಿ ಧಾರವಾಡ ನಗರದ ವ್ಯಾಪ್ತಿಯ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದಿನಾಂಕ 23.12.2025 ರಂದು ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.
ಈ ವೇಳೆ 1016 ಕ್ಕೂ ಹೆಚ್ಚು ಡ್ರಗ್ಸ್ ಬಳಕೆದಾರರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ಮತ್ತು ಧಾರವಾಡ ಡಿಮಾನ್ಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು.
ನಂತರ ಇವರನ್ನು ಹುಬ್ಬಳ್ಳಿಯ ರಂಭಾಪುರಿ ಕಲ್ಯಾಣ ಮಂಟಪಕ್ಕೆ ಕರೆತಂದು ಡ್ರಗ್ಸ್ ಬಳಕೆದಾರರಿಗೆ ತಜ್ಞರಿಂದ ಕೌನ್ಸೆಲಿಂಗ್, ಅವರ ಪೋಷಕರಿಗೆ ಮಕ್ಕಳ ಬಗ್ಗೆ ತೆಗೆದುಕೊಳ್ಳಬೇಕಾದ ಕಾಳಜಿ ಹಾಗೂ ಮನಪರಿವರ್ತನೆ ಬಗ್ಗೆ ಕಾರ್ಯಕ್ರಮ ನಡೆಸಲಾಗಿತ್ತು.
ಇದುವರೆಗೂ ಒಟ್ಟು 7 ಬಾರಿ ವಿಶೇಷ ಕಾರ್ಯಾಚರಣೆ ನಡೆಸಲಾಗಿದ್ದು, ಒಟ್ಟು 3800 ಕ್ಕೂ ಹೆಚ್ಚು ಶಂಕಿತ ಡ್ರಗ್ಸ್ ಬಳಕೆದಾರರ ವೈದ್ಯಕೀಯ ಪರೀಕ್ಷೆ ಮಾಡಲಾಗಿದೆ.
ಅದರಲ್ಲಿ ಪಾಸಿಟಿವ್ ಬಂದ 1419 ಕ್ಕೂ ಹೆಚ್ಚು ಡ್ರಗ್ಸ್ ಬಳಕೆದಾರರ ಮೇಲೆ 282 FIR ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಅವಳಿ ನಗರದ ಪೊಲೀಸರು ಡ್ರಗ್ಸ್ ಸಾಗಣೆ ಹಾಗೂ ಬಳಕೆದಾರರ ಮೇಲೆ ಹದ್ದಿನ ಕಣ್ಣಿಟ್ಟಿದ್ದರು ಸಹ, ಗಾಂಜಾ ಘಾಟು ಅವಳಿ ನಗರದಲ್ಲಿ ಹರಡಿದೆ. ಇದನ್ನು ಬೇರು ಸಮೇತ ಕಿತ್ತು ಹಾಕಲು, ಮತ್ತಷ್ಟು ಶ್ರಮ ಹಾಕಬೇಕಿದೆ.





