ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ SMS ನೇಮಕಾತಿಯಲ್ಲಿ ಕುಲಪತಿ ಪಿ ಎಲ್ ಪಾಟೀಲ್ ಅವರ ಅವಧಿಯಲ್ಲಿ ಆದ ನೇಮಕಾತಿಗಳಲ್ಲಿ ಅಕ್ರಮ ಮತ್ತು ಇತ್ತೀಚೆಗೆ ವರ್ಗಾವಣೆಯಲ್ಲಿ ನಿಯಮಗಳನ್ನು ಗಾಳಿಗೆ ತೂರಿದ ಆರೋಪ ಕೇಳಿಬರುತ್ತಿದ್ದು, ಸೂಕ್ತ ತನಿಖೆಯಾಗಬೇಕು ಎಂದು ಶಿವಸೇನಾ ಆಗ್ರಹಿಸಿದೆ.
ಇಡೀ ದೇಶದಲ್ಲಿ ಧಾರವಾಡ ಕೃಷಿ ವಿಶ್ವ ವಿದ್ಯಾಲಯ ಅತ್ಯಂತ ಗೌರವ ಹಾಗೂ ಅಗ್ರಗಣ್ಯ ವಿಶ್ವವಿದ್ಯಾಲಯ ಎನ್ನುವ ಹೆಮ್ಮೆಯಿದೆ. ಈ ಭಾಗದ ರೈತರಿಗೆ ವಿಶ್ವವಿದ್ಯಾಲಯ ಒಂದು ವರದಾನವಾಗಿದೆ. ಹಲವಾರು ಕೃಷಿ ಸಂಶೋಧನೆಗಳು ರೈತರಿಗೆ ಹೊಸ ಚೈತನ್ಯ ತಂದಿದೆ.
ಪ್ರಸಕ್ತ ವಿಶ್ವವಿದ್ಯಾಲಯದ ಆಡಳಿತದಲ್ಲಿ ಪಾರದರ್ಶಕತೆ, ಅವ್ಯವಹಾರಗಳ ಬಗ್ಗೆ ಅಪಸ್ವರ ಎದ್ದಿದ್ದು ಸಮಸ್ತ ಸಾರ್ವಜನಿಕರಿಗೆ ಹಾಗೂ ರೈತರಿಗೆ ಅತ್ಯಂತ ನೋವು ತಂದಿದೆ.
ವಿಶೇಷವಾಗಿ ಕುಲಪತಿ ಪಿ ಎಲ್ ಪಾಟೀಲ್ ಅವರ ಅವಧಿಯಲ್ಲಿ ಆಗಿರುವ SMS ನೇಮಕಾತಿಯಲ್ಲಿ ಸಿಂಧುತ್ವ ಪರಿಶೀಲನೆ ಇಲ್ಲದೆ ನೇಮಕಾತಿ ಮತ್ತು ಅವರು ವಾಟ್ಸಾಪ್ ನಲ್ಲಿ ಕರೆಮಾಡಿ ಲಂಚದ ವಿಚಾರವಾಗಿ ಚರ್ಚಿಸಿದ ಬಗ್ಗೆ ಸಾರ್ವಜನಿಕರಲ್ಲಿ ಚರ್ಚೆ ನಡೆಯುತ್ತಿದೆ ಎಂದು ಶಿವಸೇನಾ ಆರೋಪಿಸಿದೆ.
ಇಂದು ದಾರವಾಡ ಕೃಷಿ ವಿಶ್ವವಿದ್ಯಾಲಯ ಭ್ರಷ್ಟಾಚಾರ ಖಂಡಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಗಂಗಾಧರ್ ಕುಲಕರ್ಣಿ ರವರ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು.
ಈ ವೇಳೆ ಜಿಲ್ಲಾ ಅಧ್ಯಕ್ಷರಾದ ಸಿದ್ದಾರ್ಥ್ ಶಿವಶರಣ, ಪ್ರಧಾನ ಕಾರ್ಯದರ್ಶಿ ಭರತ್ ಸಾವಂತ್, ಮಹಿಳಾ ಮೋರ್ಚಾ ಅಧ್ಯಕ್ಷೆ ಆರ್ ಪಿ ಪಾಟೀಲ್, ನಾಗರಾಜ್, ಅಕ್ಷಯ್, ಕದಂ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.





