ನವಲಗುಂದ ತಾಲೂಕಿನ ಮೊರಬ ಗ್ರಾಮ ಪಂಚಾಯತಿಯಲ್ಲಿ ಅಭಿವೃದ್ಧಿ ಅಧಿಕಾರಿ ಎಂದು ನೇಮಕವಾಗಿದ್ದ ಬಾಬು ದೇಸಾಯಿ ಎಂಬುವವರು, ಧಾರವಾಡ ಜಿಲ್ಲಾ ಪಂಚಾಯತಿಯಲ್ಲಿ ಠಿಕಾಣಿ ಹೂಡಿದ್ದು, ಅವರನ್ನು ಮೊರಬ ಗ್ರಾಮಕ್ಕೆ ಕಳಿಸಿ ಎಂದು ಮೊರಬ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಧಾರವಾಡ ಜಿಲ್ಲಾ ಪಂಚಾಯತಿಯಲ್ಲಿ ನರೇಗಾ ಯೋಜನೆ ನೋಡಿಕೊಳ್ಳುತ್ತಿರುವ ಬಾಬು ದೇಸಾಯಿ, ಮೊರಬ ಗ್ರಾಮ ಪಂಚಾಯತಿಯಲ್ಲಿ ಅಭಿವೃದ್ಧಿ ಅಧಿಕಾರಿ ಎಂದು ಕರ್ತವ್ಯ ನಿರ್ವಹಿಸಬೇಕಿತ್ತು.
ಆದರೆ ಬಾಬು ದೇಸಾಯಿ, ಕಾನೂನು ಬಾಹಿರವಾಗಿ ನಿಯೋಜನೆ ಮಾಡಿಕೊಂಡು ಧಾರವಾಡ ಜಿಲ್ಲಾ ಪಂಚಾಯತಿಯಲ್ಲಿ ಠಿಕಾಣಿ ಹೂಡಿದ್ದಾರೆ.

ಗ್ರಾಮ ಪಂಚಾಯತಿಯಲ್ಲಿನ ನೌಕರರನ್ನು, ತಾಲೂಕು ಪಂಚಾಯತಿ ಹಾಗೂ ಜಿಲ್ಲಾ ಪಂಚಾಯತಿಗೆ ನಿಯೋಜನೆ ಮಾಡಕೂಡದು ಎಂದು ಸರ್ಕಾರ 2018 ರ ಆದೇಶದಲ್ಲಿ ಹೇಳಿದ್ದರೂ, ಕಾನೂನು ಬಾಹಿರವಾಗಿ ನಿಯೋಜನೆ ಮಾಡಿಸಿಕೊಂಡು ಬಂದಿದ್ದಾರೆ.
ಮೊರಬದ ಪಿಡಿಓ ಆಗಿ ಕೆಲಸ ಮಾಡಬೇಕಿದ್ದ ಬಾಬು ದೇಸಾಯಿ, ನಿಯೋಜನೆ ಮೇಲೆ ಧಾರವಾಡ ಜಿಲ್ಲಾ ಪಂಚಾಯತಿಗೆ ಬಂದ ಮೇಲೆ 9 ಜನ ಪ್ರಭಾರ ಪಿಡಿಓ ಗಳು ಬದಲಾಗಿದ್ದಾರೆ.

ಮೊರಬ ಗ್ರಾಮ, ನವಲಗುಂದ ತಾಲೂಕಿನಲ್ಲಿಯೇ ಅತೀ ದೊಡ್ಡ ಗ್ರಾಮವಾಗಿದ್ದು, ನವಲಗುಂದ ವಿಧಾನಸಭಾ ಕ್ಷೇತ್ರದ ಎರಡನೇ ರಾಜಕೀಯ ಶಕ್ತಿ ಕೇಂದ್ರ ಎಂದು ಹೆಸರಾಗಿದೆ.
ಖಾಯಂ ಪಿಡಿಓ ಇಲ್ಲದೆ ಇರುವದರಿಂದ ಗ್ರಾಮದ ಅಭಿವೃದ್ಧಿ ಹಾಗೂ ಆಡಳಿತ ಕುಂಠಿತಗೊಂಡಿದೆ. ಸರ್ಕಾರದ ಕ್ರಮಕ್ಕೆ ಅಲ್ಲಿನ ಜನ ಆಕ್ರೋಶಗೊಂಡಿದ್ದಾರೆ.





