ಸರ್ಕಾರಿ ಸ್ಥಳಗಳಲ್ಲಿ ಆರ್.ಎಸ್.ಎಸ್ ಚಟುವಟಿಕೆಗಳನ್ನು ಕೈಗೊಳ್ಳಬಾರದು. ತಮಿಳುನಾಡು ಮಾದರಿಯಲ್ಲಿ ಇಲ್ಲಿಯೂ ನಿಷೇಧ ಮಾಡಬೇಕು ಎಂದು ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ನನಗೆ ಪತ್ರ ಬರೆದಿದ್ದಾರೆ. ಅದರಲ್ಲಿ ತಪ್ಪೇನಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವಿಟ್ ಮಾಡುವ ಮೂಲಕ ಪ್ರಶ್ನಿಸಿದ್ದಾರೆ.
ಇಂತಹ ಬೆದರಿಕೆಗಳಿಗೆ ಯಾರೂ ಹೆದರುವುದಿಲ್ಲ ಎಂದಿರುವ ಅವರು ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಬಂದಿರುವ ಬೆದರಿಕೆ ಕರೆಗಳ ಕುರಿತ ಆಡಿಯೋ ಕೂಡ ಬಿಡುಗಡೆ ಮಾಡಿದ್ದಾರೆ ಎಂದಿದ್ದಾರೆ.
ತಮಿಳುನಾಡಿನಲ್ಲಿ ಯಾವ ರೀತಿ ನಿಷೇಧ ಹೇರಲಾಗಿದೆ ಎಂಬ ಬಗ್ಗೆ ಮಾಹಿತಿ ತರಿಸುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಲಾಗಿದೆ. ವರದಿ ಬಂದ ನಂತರ ಅದನ್ನು ಪರಿಶೀಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿಳಿಸಿದ್ದಾರೆ.
ಪ್ರಿಯಾಂಕ್ ಖರ್ಗೆಯವರಿಗೆ ರಕ್ಷಣೆಯನ್ನು ಕೂಡ ಒದಗಿಸಲಾಗುವುದು ಎಂದಿರುವ ಅವರು, ದುಷ್ಟ ಶಕ್ತಿಗಳು ಯಾವಾಗಲೂ ಹೀಗೆ ಬೆದರಿಕೆ ಒಡ್ಡುವ ಕೆಲಸವನ್ನೇ ಮಾಡುತ್ತವೆ. ಬೆದರಿಕೆಗಳಿಗೆ ಪ್ರಿಯಾಂಕ್ ಅವರು ಹೆದರುವುದಿಲ್ಲ, ನಾನೂ ಹೆದರುವುದಿಲ್ಲ ಎಂದು ಸಿದ್ದರಾಮಯ್ಯನವರು ತಿಳಿಸಿದ್ದಾರೆ.
ಬಿಜೆಪಿಯವರು, ತಾಕತ್ತಿದ್ದರೆ ಆರ್.ಎಸ್.ಎಸ್. ಮೇಲೆ ನಿಷೇಧ ಹೇರಲಿ ಎಂದು ಸವಾಲು ಹಾಕಿದ್ದಾರೆ. ಅವರು ಹೀಗೆ ಹಿಂದೊಮ್ಮೆ ಸವಾಲು ಹಾಕಿದ್ದನ್ನು ನೆನಪು ಮಾಡಿಕೊಂಡರೆ ಉತ್ತಮ ಎಂದು ಕಾಲೆಳೆದಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿಯೂ ಬಿಜೆಪಿಯವರು ತಾಕತ್ತಿದ್ದರೆ ಬನ್ನಿ ಎಂದಿದ್ದರು, ಕೊನೆಗೆ ಸೋತು ಹೋದರು ಎಂದು ಸಿದ್ದರಾಮಯ್ಯನವರು ಟ್ವಿಟ್ ನಲ್ಲಿ ಉಲ್ಲೇಖಿಸಿದ್ದಾರೆ.





