ಎರಡು ದಿನಗಳ ಹಿಂದೆ ಧಾರವಾಡ ವಾರ್ತಾ ಇಲಾಖೆಯಲ್ಲಿ ಪತ್ರಕರ್ತನ ಮೇಲೆ ವಾರ್ತಾ ಸಹಾಯಕ ನಡೆಸಿದ ಹಲ್ಲೆ ಪ್ರಕರಣವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ.
ಪ್ರಕರಣ ರಾಜ್ಯದಲ್ಲಿ ದೊಡ್ಡ ಸುದ್ದಿ ಮಾಡಿದ ಬೆನ್ನಲ್ಲೇ ಧಾರವಾಡ ಜಿಲ್ಲಾಧಿಕಾರಿಗಳು ವಾರ್ತಾ ಇಲಾಖೆಯ ವಾರ್ತಾ ಸಹಾಯಕ ಸುರೇಶ ಎಂಬುವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.

ಪತ್ರಕರ್ತರಿಗೆ ರಕ್ಷಣೆ ಮತ್ತು ಸಹಕಾರ ನೀಡಬೇಕಾದ ನೀವು, ಈ ರೀತಿ ಪತ್ರಕರ್ತರ ಮೇಲೆ ಹಲ್ಲೆ ಮಾಡಿದ್ದು ಜಿಲ್ಲಾಡಳಿತಕ್ಕೆ ನಿಮ್ಮಿಂದ ಮುಜುಗುರ ಉಂಟಾಗಿದೆ ಎಂದು ಪತ್ರದಲ್ಲಿ ಬರೆಯಲಾಗಿದೆ.
ನಿಮ್ಮ ಈ ರೀತಿ ವರ್ತನೆಯಿಂದ ಕಛೇರಿ ಆಡಳಿತಕ್ಕೆ, ಹಾಗೂ ಸಾರ್ವಜನಿಕರಿಗೆ ತೊಂದರೆಯುಂಟಾಗುತ್ತಿದ್ದು, ನಿಮ್ಮ ಕರ್ತವ್ಯದಲ್ಲಿನ ನಿರ್ಲಕ್ಷ್ಯತನದಿಂದಾಗಿ ಧಾರವಾಡ ಜಿಲ್ಲಾ ಆಡಳಿತದ ಅಭಿವೃದ್ಧಿ ಸಾಧಿಸುವಲ್ಲಿ ಅನಾವಶ್ಯಕ ತೊಂದರೆ ಉಂಟಾಗಿರುತ್ತದೆ.
ಈ ರೀತಿ ನಿಮ್ಮ ವರ್ತನೆಯಿಂದ ನಿಮಗೆ ಸರ್ಕಾರಿ ಕರ್ತವ್ಯದಲ್ಲಿ ಆಸಕ್ತಿ ಇಲ್ಲದಿರುವುದು ಕಂಡುಬರುತ್ತದೆ. ಸರ್ಕಾರಿ ಕಚೇರಿಯಲ್ಲಿಯೆ ಈ ರೀತಿ ಹಲ್ಲೆ ಮಾಡಿ ಕರ್ನಾಟಕ ನಾಗರಿಕ ಸೇವೆ (ನಡತೆ) ನಿಯಮಗಳು, 2021 ನೇದ್ದನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ.
ಕಾರಣ, ನೀವು ಕಛೇರಿಯಲ್ಲಿಯೇ ಶ್ರೀ ಚಂದ್ರಶೇಖರ ಹಿರೇಮಠ ಎಂಬುವವರ ಮೇಲೆ ಹಲ್ಲೆ ಮಾಡಿ ಕರ್ನಾಟಕ ನಾಗರಿಕ ಸೇವೆ (ನಡತೆ) ನಿಯಮಗಳು, 2021 ನೇದ್ರನ್ನು ಉಲ್ಲಂಘಿಸಿರುವುದರಿಂದ, ಕರ್ನಾಟಕ ನಾಗರಿಕ ಸೇವಾ (ವರ್ಗಿಕರಣ, ನಿಯಂತ್ರಣ ಮತ್ತುಮೇಲ್ಮನವಿ) ನಿಯಮಾವಳಿಗಳು, 1957 ರನ್ವಯ ನಿಮ್ಮ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಏಕೆ ಸಲ್ಲಿಸಬಾರದು ? ಎಂಬ ಬಗ್ಗೆ ಈ ನೋಟೀಸು ತಲುಪಿದ 24 ಗಂಟೆಯೊಳಗಾಗಿ ಈ ಕೆಳಗೆ ಸಹಿ ಮಾಡಿದವರ ಸಮಕ್ಷಮ ಹಾಜರಾಗಿ ನಿಮ್ಮ ಲಿಖಿತ ಸಮಜಾಯಿಷಿಯನ್ನು ಸಲ್ಲಿಸತಕ್ಕದ್ದು ಎಂದು ಪತ್ರದಲ್ಲಿ ಉಲ್ಲೆಖಿಸಲಾಗಿದೆ.
ತಪ್ಪಿದಲ್ಲಿ ನಿಯಮಾನುಸಾರ ನಿಮ್ಮ ವಿರುದ್ಧ ಸೂಕ್ತ ಶಿಸ್ತಿನ ಕ್ರಮ ಜರುಗಿಸಲು ಸರ್ಕಾರಕ್ಕೆ, ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಕಾರಣ ಕೇಳಿ ನೋಟೀಸನಲ್ಲಿ ತಿಳಿಸಲಾಗಿದೆ.





