ಬೆಳಕು ಹರಿಯುತ್ತಿದ್ದಂತೆ ಧಾರವಾಡದಲ್ಲಿ ಇಂದು ಪ್ರಕೃತಿ, ಹೊಸ ಬಗೆಯ ಅನುಭವವೊಂದನ್ನು ನೀಡಿತು. ಎಂದಿನ ಬೆಳಗಿನ ವಾತಾವರಣಕ್ಕೆ ಭಿನ್ನವಾಗಿ ನಗರವನ್ನು ಮಂಜಿನ ಮುಸುಕು ಆವರಿಸಿದ್ದು, ತಂಪಾದ ಗಾಳಿ ಹಾಗೂ ಸಣ್ಣನೆಯ ಮಳೆಹನಿಗಳು ಧಾರವಾಡಿಗರಿಗೆ ಮುದ ನೀಡಿದವು.
ಬೆಳಗಿನ ಜಾವದಿಂದಲೇ ಆಕಾಶದಲ್ಲಿ ಮೋಡ ಕವಿದ ವಾತಾವರಣ ಕಂಡುಬಂದಿತು. ಕೆಲವೇ ಹೊತ್ತಿನಲ್ಲಿ ಸಣ್ಣನೆಯ ಮಳೆಹನಿಗಳು ಭೂಮಿಗೆ ಮುತ್ತಿಕ್ಕಿದವು. ಇದರೊಂದಿಗೆ ವಾತಾವರಣ ಮತ್ತಷ್ಟು ತಂಪಾಗಿ, ನಗರದೆಲ್ಲೆಡೆ ಆಹ್ಲಾದಕರ ವಾತಾವರಣ ನಿರ್ಮಾಣವಾಯಿತು.
ಮಂಜಿನ ಮುಸುಕಿನಲ್ಲಿ ಮರಗಿಡಗಳು, ರಸ್ತೆಗಳು ಹಾಗೂ ಸುತ್ತಮುತ್ತಲಿನ ಪ್ರದೇಶಗಳು ಹೊಸ ರೂಪದಲ್ಲಿ ಕಂಗೊಳಿಸಿದವು. ಮಳೆಹನಿಯೊಂದಿಗೆ ಬೀಸಿದ ತಂಪಾದ ಗಾಳಿ ಬೆಳಗಿನ ವಾತಾವರಣಕ್ಕೆ ಮತ್ತಷ್ಟು ಸೊಬಗು ತಂದಿತು.
ಶಾಲೆಗೆ ಹೊರಟ ಮಕ್ಕಳಿಗೂ ಪ್ರಕೃತಿಯ ಸರ್ಪ್ರೈಸ್
ಬೆಳಗ್ಗೆ ಶಾಲೆಗೆ ತೆರಳುತ್ತಿದ್ದ ಮಕ್ಕಳು ಕೂಡ ದಿಢೀರ್ ಬದಲಾಗಿದ್ದ ವಾತಾವರಣವನ್ನು ಆಸಕ್ತಿಯಿಂದ ಗಮನಿಸಿದರು. ಮಂಜು, ಮೋಡ ಹಾಗೂ ಸಣ್ಣ ಮಳೆಯ ನಡುವೆ ಮಕ್ಕಳು ಶಾಲೆಯತ್ತ ಹೆಜ್ಜೆ ಹಾಕುತ್ತಲೇ, “ಇಂದು ಧಾರವಾಡದ ವಾತಾವರಣವೇ ಬದಲಾಗಿದೆ” ಎಂಬಂತೆ ಪರಸ್ಪರ ಮಾತನಾಡಿಕೊಂಡು ಸಾಗಿದರು.
ದಿನನಿತ್ಯದ ಧಾವಂತದ ನಡುವೆ ಸಿಕ್ಕ ಈ ತಂಪಾದ ಬೆಳಗ್ಗೆ ನಗರವಾಸಿಗಳ ಮುಖದಲ್ಲೂ ಮಂದಹಾಸ ಮೂಡಿಸಿತು. ಕೆಲವರು ಮಳೆಹನಿಗಳನ್ನು ಆಸ್ವಾದಿಸುತ್ತಾ, ಮಂಜಿನಿಂದ ಆವರಿಸಿದ್ದ ನಗರದ ಸೊಬಗನ್ನು ಕಣ್ತುಂಬಿಕೊಂಡರು.





