ನವಲಗುಂದ, ಅಣ್ಣಿಗೇರಿ ತಾಲೂಕುಗಳ ಜೊತೆಗೆ ಹುಬ್ಬಳ್ಳಿ ತಾಲೂಕಿನ 14 ಹಳ್ಳಿಗಳ ವ್ಯಾಪ್ತಿಯನ್ನು ಒಳಗೊಂಡ ನವಲಗುಂದ ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್ ರಾಜ್ಯ ಬರ ಅಧ್ಯಯನ ತಂಡವು ಅಕ್ಟೋಬರ್ 13 ಮಂಗಳವಾರ ಭೇಟಿ ನೀಡಿ ವಿವಿಧ ಗ್ರಾಮಗಳ ಸಂಕಷ್ಟದಲ್ಲಿರುವ ರೈತರ ಜೊತೆ ಸಮಾಲೋಚನೆ ನಡೆಸಲಿದ್ದಾರೆ ಎಂದು ಜೆಡಿಎಸ್ ಅಣ್ಣಿಗೇರಿ ನಗರ ಘಟಕದ ಅಧ್ಯಕ್ಷ ವೀರೇಶ ಶಾನುಭೋಗರ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು ಬರ ಅಧ್ಯಯನ ಕಂಡವು ಕ್ಷೇತ್ರದ ರೈತರ ಕಷ್ಟ ಕಾರ್ಪಣ್ಯಗಳನ್ನು, ನೋವುಗಳನ್ನು ಆಲಿಸಿಲು ಅವರೊಂದಿಗೆ ಸಮಾಲೋಚಿಸಿ ಆಯಾ ತಾಲೂಕುಗಳ ತಹಶೀಲ್ದಾರ್ ಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದಾರೆ ಎಂದು ಹೇಳಿದ್ದಾರೆ.
ರೈತರ ದುಃಖ ದುಮ್ಮಾನಗಳಿಗೆ ಧ್ವನಿಯಾಗುವ, ಅವರ ಕಣ್ಣೀರನ್ನು ಒರೆಸುವ ಕಾರ್ಯದಲ್ಲಿ ಸಹಭಾಗಿಯಾಗಿ ಬರ ಪರಿಸ್ಥಿತಿಯ ವಸ್ತು ಸ್ಥಿತಿಯನ್ನು ಸರಕಾರಕ್ಕೆ ಗಮನ ತರುವ ಬರ ಅಧ್ಯಯನ ತಂಡದ ಜೊತೆ ಕ್ಷೇತ್ರದ ಜೆಡಿಎಸ್ ಪದಾಧಿಕಾರಿಗಳು, ಮುಖಂಡರು, ಅಭಿಮಾನಿಗಳಲ್ಲದೆ ರೈತ ಸಂಘಗಳು ಜೊತೆಯಾಗಲಿವೆ ಎಂದು ಅವರು ತಿಳಿಸಿದ್ದಾರೆ.





