ಹುಬ್ಬಳ್ಳಿಯಲ್ಲಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರಲ್ಲಾದ ಜೋಶಿಯವರ ವಿರುದ್ದ ನಿರ್ಣಯ ಕೈಗೊಳ್ಳುತ್ತಿದ್ದಂತೆ ಹುಬ್ಬಳ್ಳಿಗೆ ಇಂದು ಸಂಜೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಭೇಟಿ ನೀಡಲಿದ್ದಾರೆ.
ಹುಬ್ಬಳ್ಳಿಯ ಪಕ್ಷದ ಕಚೇರಿಗೆ ಆಗಮಿಸುವ ಯಡಿಯೂರಪ್ಪನವರು, ಪಕ್ಷದ ಮುಖಂಡರೊಡನೆ ಚರ್ಚೆ ಮಾಡಲಿದ್ದಾರೆ. ಇಂದು ಹುಬ್ಬಳ್ಳಿಯ ಮೂರುಸಾವಿರ ಮಠದಲ್ಲಿ ನಡೆದಿರುವ ಸ್ವಾಮೀಜಿಗಳ ಸಭೆಯಲ್ಲಿ ಜೋಶಿಯವರಿಗೆ ಸಂಬಂಧಿಸಿದಂತೆ ಕೆಲ ಮಹತ್ವದ ನಿರ್ಣಯ ಕೈಗೊಂಡ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದುಕೊಂಡಿದೆ.
ಬೆಳಗಾವಿಗೆ ಇಂದು ಕಾಲಿಟ್ಟ ಜಗದೀಶ ಶೆಟ್ಟರ ಅವರ ಪರ ಪ್ರಚಾರಕ್ಕೆ ಬೆಳಗಾವಿಗೆ ಬಂದಿದ್ದ ಬಿ ಎಸ್ ಯಡಿಯೂರಪ್ಪನವರು, ಹುಬ್ಬಳ್ಳಿಗೆ ಹಠಾತ ಭೇಟಿ ನೀಡಲಿದ್ದಾರೆ. ಜೋಶಿಯವರ ಆಡಳಿತ ವೈಖರಿ ವಿರುದ್ಧ ಗಂಭೀರ ಆರೋಪ ಮಾಡಿರುವ ದಿಂಗಾಲೇಶ್ವರ ಸ್ವಾಮೀಜಿಗಳನ್ನು ಭೇಟಿಯಾಗಿ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಲಿದ್ದಾರೆ ಎಂದು ಗೊತ್ತಾಗಿದೆ.
ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಖುರ್ಚಿಯಿಂದ ಕೆಳಗೆ ಇಳಿಸಿ, ಜೋಶಿ, ಮುಖ್ಯಮಂತ್ರಿಗಳಾಗಲು ಹೊರಟಿದ್ದರು ಎಂದು ನೇರವಾಗಿ ಆರೋಪಿಸಿರುವ ದಿಂಗಾಲೇಶ್ವರ ಶ್ರೀಗಳನ್ನು ಯಡಿಯೂರಪ್ಪ ಭೇಟಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.





