ಹೋಳಿ ಹುಣ್ಣಿಮೆ ಬಂತೆಂದರೆ ಸಾಕು ನಾಡಿನ ದಶ ದಿಕ್ಕುಗಳಿಂದ ಜನ, ನವಲಗುಂದದ ರಾಮಲಿಂಗ ಕಾಮಣ್ಣನ ದರ್ಶನಕ್ಕೆ ಮುಗಿಬೀಳುತ್ತಾರೆ. ಇಲ್ಲಿ ಬಂದು ಹರಕೆ ಹೊರುತ್ತಾರೆ. ಹರಕೆ ಹೊತ್ತ ಭಕ್ತರ ಸಂಕಲ್ಪವನ್ನು ರಾಮಲಿಂಗ ಕಾಮಣ್ಣ ಒಂದೇ ವರ್ಷದಲ್ಲಿ ಪೂರೈಸುತ್ತಾನೆ ಅನ್ನೋ ಪ್ರತೀತಿ ಇದೆ. ಮದುವೆಯಾಗದವರು, ಮದುವೆಯಾಗಿ ಮಕ್ಕಳಾಗದವರು, ಸರ್ಕಾರಿ ನೌಕರಿ ಸಿಗಲಿ ಎಂದು ಬಯಸಿದವರು, ಮನೆ ಕಟ್ಟಬೇಕು ಅಂದುಕೊಂಡವರು, ಹೀಗೆ ಅನೇಕ ಸಂಕಲ್ಪಗಳನ್ನು ಹೊತ್ತು ಬಂದವರು ಕಾಮಣ್ಣನ ಎದುರು ಬೇಡಿಕೊಳ್ಳುತ್ತಾರೆ. ಅಚ್ಚರಿಯ ವಿಷಯ ಏನೆಂದರೆ, ಇಲ್ಲಿ ಹರಕೆ ಹೊತ್ತು ಹೋದವರು, ಒಂದೇ ವರ್ಷದಲ್ಲಿ ಹರಕೆ ಫಲ ನೀಡಿದ್ದರ ಬಗ್ಗೆ ಅನೇಕ ಉಧಾಹರಣೆಗಳಿವೆ. ಹೋಳಿ ಹುಣ್ಣಿಮೆಯ ಸಂದರ್ಭದಲ್ಲಿ ಪ್ರತಿಷ್ಟಾಪನೆಗೊಳ್ಳುವ ರಾಮಲಿಂಗ ಕಾಮಣ್ಣನಿಗೆ, ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಹಣ ಹುಂಡಿ ಸೇರುತ್ತದೆ. ಸಧ್ಯ ಭಕ್ತರು ಕೊಟ್ಟ ಹಣ ಕೋಟಿ ಲೆಕ್ಕಕ್ಕೆ ಮುಟ್ಟಿದೆ. ವಿಪರ್ಯಾಸ ಎಂದರೆ ಹುಂಡಿ ಸೇರಿದ ಕೋಟ್ಯಾಂತರ ರೂಪಾಯಿ ಹಣಕ್ಕೆ ಸ್ಕೆಚ್ ಹಾಕಿ, ಹಣ ಲಪಟಾಯಿಸಿದ್ದರ ಬಗ್ಗೆ ಭಕ್ತ ವಲಯದಲ್ಲಿ ರಂಪಾಟ ಶುರುವಾಗಿದೆ. ರಾಮಲಿಂಗ ಕಾಮಣ್ಣನ ಲೆಕ್ಕ ಕೇಳಲು ಊರಿನ ಜನ ಮುಂದಾಗಿದ್ದಾರೆ. ಸಧ್ಯ ಕೆಲವು ಜನ ಹಣ ಹೊಂದಿಸಿ ಕೊಟ್ಟಿದ್ದು, ಇನ್ನು ಕೆಲವರು ” ನಾನವನಲ್ಲ, ನಾನವನಲ್ಲ” ಅನ್ನುತ್ತಿದ್ದಾರೆ. ರಾಮಲಿಂಗ ಕಾಮಣ್ಣನ ಹಣ ಕೊಳ್ಳೆ ಹೊಡೆದು ಬದುಕು ಕಟ್ಟಿಕೊಂಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಲೆಕ್ಕ ಕೇಳಲು ಆರಂಭ ಮಾಡಿದ ಬಳಿಕ 78 ಲಕ್ಷ ಹಣ ಹೊಂದಿಕೆಯಾಗಿದೆ. ಸಮಿತಿಯವರು ಹೇಳುವ ಪ್ರಕಾರ ಇನ್ನು ಎರಡೂವರೆ ಕೋಟಿ ಹಣ ಬರಬೇಕು ಅಂತಿದ್ದಾರೆ. ಊರಿನವರೆಲ್ಲ ಸೇರಿ ರಾಮಲಿಂಗ ಕಾಮಣ್ಣನ ಸೇವೆ ಮಾಡುತ್ತಿದ್ದು, ರಾಮಲಿಂಗ ಕಾಮಣ್ಣನನ್ನು ನಂಬಿ ಜನ ಬಂದರೆ, ಮತ್ತೊಂದೆಡೆ, ಕೂಡಿದ ಹಣಕ್ಕೆ ಸ್ಕೆಚ್ ಹಾಕಿದ್ದಾರೆ.





