ಸಿಬಿಐ ಅಂತರ-ರಾಜ್ಯ ಅಕ್ರಮ/ನಕಲಿ ಉದ್ಯೋಗ ರಾಕೆಟ್ ನ್ನು ಭೇಧಿಸಿದೆ. ಕೇಂದ್ರೀಯ ತನಿಖಾ ದಳವು ನಡೆಸುತ್ತಿರುವ ಪ್ರಕರಣವೊಂದರ ತನಿಖೆಯಲ್ಲಿ ದೊಡ್ಡ ಮೋಸದ ಜಾಲ ಪತ್ತೆಯಾಗಿದೆ. ಅನೇಕ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಕ್ರಮ ಉದ್ಯೋಗ ದಂಧೆಯನ್ನು ಭೇದಿಸಿರುವ ಸಿ ಬಿ ಐ ಮೂವರನ್ನು ಬಂಧಿಸಿದೆ. ವಿವಿಧ ಕೇಂದ್ರ ಸರ್ಕಾರದ ಹುದ್ದೆಗಳಿಗೆ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಹತಾಶ ಉದ್ಯೋಗಾಕಾಂಕ್ಷಿಗಳನ್ನು ಸಂಪರ್ಕಿಸುವುದು ಈ ಆರೋಪಿಗಳ ವಿಧಾನವಾಗಿತ್ತು ಎನ್ನಲಾಗಿದೆ. ಈ ಮೋಸದ ಜಾಲ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಧಾರವಾಡಕ್ಕೂ ಹಬ್ಬಿದೆ ಎಂದು ಹೇಳಲಾಗಿದೆ.
ಉದ್ಯೋಗಾಕಾಂಕ್ಷಿಗಳಿಂದ ಸಂಸ್ಕರಣಾ ಶುಲ್ಕ / ಭದ್ರತಾ ಠೇವಣಿಗಳನ್ನು ಪಡೆದು ಭಾರಿ ಮೊತ್ತದ ಹಣವನ್ನು (ರೂ. 10-20 ಲಕ್ಷದ ನಡುವೆ, ಕೆಲವೊಮ್ಮೆ ಕಂತುಗಳಲ್ಲಿ) ಪಡೆಯುತ್ತಿದ್ದರು ಎನ್ನಲಾಗಿದೆ. ಆರೋಪಿಗಳು ನಕಲಿ ನೇಮಕಾತಿ ಪತ್ರ, ವಿವಿಧ ಕೇಂದ್ರಗಳಲ್ಲಿ ತರಬೇತಿಗಾಗಿ ಕರೆ ಪತ್ರಗಳು ಮತ್ತು ನಕಲಿ ತರಬೇತಿ ಕೇಂದ್ರಗಳಲ್ಲಿ ಅಭ್ಯರ್ಥಿಗಳ ನಕಲಿ ದಾಖಲೆಗಳನ್ನು ನೀಡುವ ಸಂಪೂರ್ಣ ವ್ಯವಸ್ಥೆಯನ್ನು ಮಾಡಿ ನಂಬಿಸುತ್ತಿದ್ದರು.
ಪಾಟ್ನಾ, ಮುಂಬೈ, ಬೆಂಗಳೂರು, ಮಂಗಳೂರು ಮತ್ತು ಧನ್‌ಬಾದ್ ಸೇರಿದಂತೆ ಒಂಬತ್ತು ಸ್ಥಳಗಳಲ್ಲಿ ಸಿ ಬಿ ಐ ಹುಡುಕಾಟ ನಡೆಸಿದ್ದು, ಮುಂಬೈನ ಸಾಕಿನಾಕಾ ಪ್ರದೇಶದಲ್ಲಿ ಎರಡು ನಕಲಿ ತರಬೇತಿ ಕೇಂದ್ರಗಳು ಮತ್ತು ಪಾಟ್ನಾ ದಲ್ಲಿ ಒಂದು ಕೇಂದ್ರ, ಸೇರಿದಂತೆ ಸುಮಾರು 25 ಕಡೆ ದಾಳಿ ಮಾಡಲಾಗಿದೆ. ಎಫ್‌ಸಿಐ, ರೈಲ್ವೇ, ಜಿಎಸ್‌ಟಿ ಮುಂತಾದ ವಿವಿಧ ಕೇಂದ್ರ ಸರ್ಕಾರದ ಇಲಾಖೆಗಳ ನಕಲಿ ನೇಮಕಾತಿ ಪತ್ರ ಕೊಡುತ್ತಿದ್ದರು ಎನ್ನಲಾಗಿದೆ. ಸಕಿನಾಕಾ ತರಬೇತಿ ಕೇಂದ್ರದಲ್ಲಿ ಹುಡುಕಾಟ ನಡೆಸಿದಾಗ ಹೆಚ್ಚಿನ ಉದ್ಯೋಗಾಕಾಂಕ್ಷಿಗಳು ಕರ್ನಾಟಕದವರು ಮತ್ತು ಕೆಲವರು ಮಹಾರಾಷ್ಟ್ರದವರು ಎಂದು ಕಂಡುಬಂದಿದೆ. ಹುಡುಕಾಟದ ಸಮಯದಲ್ಲಿ ನಕಲಿ ಕರೆ ಪತ್ರಗಳು, ನಕಲಿ ನೇಮಕಾತಿ ಪತ್ರಗಳು, ಉದ್ಯೋಗಾಕಾಂಕ್ಷಿಗಳ ನಕಲಿ ತರಬೇತಿ ದಾಖಲೆಗಳಂತಹ ದೋಷಾರೋಪಣೆಯ ದಾಖಲೆಗಳನ್ನು ಸಿ ಬಿ ಐ ವಶಪಡಿಸಿಕೊಂಡಿದೆ.
ಪ್ರಮುಖ ಇಬ್ಬರು ಕಿಂಗ್‌ಪಿನ್ ಗಳು ಮಂಗಳೂರಿನಲ್ಲಿದ್ದಾರೆ. ಹುಬ್ಬಳ್ಳಿಗೂ ಹಬ್ಬಿದ ಜಾಲ
ಸರ್ಕಾರಿ ಉದ್ಯೋಗ ಕೊಡುವಡದಾಗಿ ವಂಚಿಸುತ್ತಿದ್ದ ಜಾಲದ ಪ್ರಮುಖ ಕಿಂಗ್ ಪಿನ್ ಗಳು ಮಂಗಳೂರಿನಿಂದ ಆಪರೇಟ ಮಾಡುತ್ತಿದ್ದರು ಎಂಬುದು ಗೊತ್ತಾಗಿದೆ. ನಕಲಿ ಮೋಸದ ಜಾಲ ಹುಬ್ಬಳ್ಳಿ, ಧಾರವಾಡಕ್ಕೆ ಹಬ್ಬಿದ್ದು, ಅದರಲ್ಲಿ ಓರ್ವ ಹುಬ್ಬಳ್ಳಿಯವನಾಗಿದ್ದಾನೆ ಎನ್ನಲಾಗಿದೆ. ಆತ ರಾಜಕೀಯ ನಾಯಕರ ನಿಕಟ ಸಂಪರ್ಕ ಹೊಂದಿದ್ದು, ನಕಲಿ ಸರ್ಕಾರಿ ನೇಮಕಾತಿ ಪ್ರಮಾಣ ಪತ್ರ ನೀಡಿ, ಅನೇಕ ಯುವಕರನ್ನು ವಂಚಿಸಿದ್ದಾನೆ ಎನ್ನಲಾಗಿದೆ.





