ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ನಾಳೆ ಬೆಳಗಾವಿಗೆ ಆಗಮಿಸಲಿದ್ದಾರೆ. ಜಗದೀಶ ಶೆಟ್ಟರ ಬರುವ ಮುನ್ನವೇ ಬೆಳಗಾವಿಗೆ ಆಗಮಿಸಲಿರುವ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಪಕ್ಷದ ನಾಯಕರ ಜೊತೆ ಚುನಾವಣೆ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಜಗದೀಶ ಶೆಟ್ಟರ ಬೆಳಗಾವಿಗೆ ಬರುತ್ತಿದ್ದಂತೆ ರಾಣಿ ಚೆನ್ನಮ್ಮ, ಛತ್ರಪತಿ ಶಿವಾಜಿ, ಬಸವೇಶ್ವರ, ಅಂಬೇಡ್ಕರ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ. ಶೆಟ್ಟರ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಿರುವ ಬೆಳಗಾವಿ ಬಿಜೆಪಿ ನಾಯಕರು ಮಧ್ಯಾಹ್ನ 2 ಘಂಟೆಗೆ ಶೆಟ್ಟರ ಅವರನ್ನು ಪಕ್ಷದ ಕಚೇರಿಗೆ ಬರಮಾಡಿಕೊಳ್ಳಲಿದ್ದಾರೆ.

ಜಗದೀಶ ಶೆಟ್ಟರ ಅವರಿಗೆ ಬಿಜೆಪಿ ಟಿಕೇಟ ಘೋಷಣೆಯಾಗುತ್ತಿದ್ದಂತೆ ಮುನಿಸಿಕೊಂಡಿದ್ದ ಬೆಳಗಾವಿ ಬಿಜೆಪಿ ನಾಯಕರ ಜೊತೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಚರ್ಚೆ ನಡೆಸಲಿದ್ದಾರೆ. ಚುನಾವಣೆಯನ್ನು ಎಲ್ಲರೂ ಒಗ್ಗಟ್ಟಿನಿಂದ ಮಾಡುವಂತೆ ಹೈಕಮಾಂಡನಿಂದ ಸೂಚನೆ ಬಂದಿದೆ ಎನ್ನಲಾಗಿದೆ. ಖುದ್ದು ಗೃಹ ಸಚಿವ ಅಮಿತ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಕಟ್ಟುನಿಟ್ಟಿನ ಸೂಚನೆ ರವಾನೆ ಮಾಡಿದ್ದಾರೆ.
ನಾಯಕರುಗಳು ಅಪಸ್ವರ ಬಿಟ್ಟು, ಒಂದಾಗಿ ಪಕ್ಷ ಸೂಚಿಸಿದ ಅಭ್ಯರ್ಥಿ ಪರವಾಗಿ ಕೆಲಸ ಮಾಡುವಂತೆ ಯಡಿಯೂರಪ್ಪನವರು ಈಗಾಗಲೇ ಬೆಳಗಾವಿ ಬಿಜೆಪಿ ನಾಯಕರಿಗೆ ಹೇಳಿದ್ದು, ನಾಯಕರ ಜೊತೆ ಯಡಿಯೂರಪ್ಪನವರು ಖುದ್ದು ಚರ್ಚೆ ನಡೆಸಲಿದ್ದಾರೆ. ಶೆಟ್ಟರ ಅವರ ಬೆನ್ನಿಗೆ ನಿಂತಿರುವ ಯಡಿಯೂರಪ್ಪನವರು, ಸಂಘಟಿತ ಪ್ರಯತ್ನ ನಡೆಸಿದ್ದಾರೆ.





