ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ತಟ್ಟಲಿದೆ. ಕೇಂದ್ರ ಸಚಿವ ಪ್ರಲ್ಲಾದ ಜೋಶಿ ಪ್ರತಿನಿಧಿಸುವ ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು, ಮಾಜಿ ಪಾಲಿಕೆ ಸದಸ್ಯ, ಕುರುಬ ಸಮಾಜದ ನಾಯಕ ಶಿವಾನಂದ ಮುತ್ತಣ್ಣವರ ತೀರ್ಮಾನಿಸಿದ್ದಾರೆ.
ಇದೇ ತಿಂಗಳು 16 ರಂದು ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಮುತ್ತಣ್ಣವರ ನಾಮಪತ್ರ ಸಲ್ಲಿಸಲಿದ್ದಾರೆ. ಕೆ ಎಸ್ ಈಶ್ವರಪ್ಪನವರ ಮಗ ಕಾಂತೇಶಗೆ ಹಾವೇರಿ ಕ್ಷೇತ್ರದ ಬಿಜೆಪಿ ಟಿಕೇಟ ತಪ್ಪಿದ ಬಳಿಕ ಆಕ್ರೋಶ ವ್ಯಕ್ತಪಡಿಸಿದ್ದ ಶಿವಾನಂದ ಮುತ್ತಣ್ಣವರ, ಬಿಜೆಪಿ ವರಿಷ್ಟರ ವಿರುದ್ಧ ಮಾತನಾಡಿದ್ದರು.
ಎರಡನೇ ದೊಡ್ಡ ಸಂಖ್ಯೆಯಲ್ಲಿರುವ ಕುರುಬ ಸಮಾಜಕ್ಕೆ ಒಂದೇ ಒಂದು ಟಿಕೇಟ ನೀಡದಿರುವದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಕೆ ಎಸ್ ಈಶ್ವರಪ್ಪನವರನ್ನು ಬಿಜೆಪಿ ನಾಯಕರು ಮೂಲೆಗುಂಪು ಮಾಡುತ್ತಿದ್ದಾರೆಂದು ಬಹಿರಂಗ ಹೇಳಿಕೆ ನೀಡಿದ್ದರು. ಬ್ರಾಹ್ಮಣರಿಗೆ ಮೂರು ಕ್ಷೇತ್ರದಲ್ಲಿ ಬಿಜೆಪಿ ಟಿಕೇಟ್ ನೀಡಿದೆ, ಕುರುಬರಿಗೆ ಒಂದು ಟಿಕೇಟ ನೀಡಿಲ್ಲ ಎಂದ ಮುತ್ತಣ್ಣವರ, ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಪಕ್ಷೇತರರಾಗಿ ಸ್ಪರ್ಧೆ ಮಾಡಲಿದ್ದಾರೆ. ಕೆ ಎಸ್ ಈಶ್ವರಪ್ಪನವರ ಕಟ್ಟಾ ಬೆಂಬಲಿಗರಾಗಿರುವ ಶಿವಾನಂದ, ಗುರುವಿನ ಹಾದಿ ತುಳಿಯಲಿದ್ದಾರೆ.





