ಧಾರವಾಡದಲ್ಲಿ ಭಕ್ತರ ಸಭೆ ನಡೆಸಿದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಭಕ್ತರ ಆಶಯದಂತೆ ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾರೆ. ಪ್ರಲ್ಲಾದ ಜೋಶಿಯವರ ವಿರುದ್ಧ ಹೋರಾಟ ಅನಿವಾರ್ಯ ಎಂದಿರುವ ದಿಂಗಾಲೇಶ್ವರ ಶ್ರೀಗಳು ಜೋಶಿಯವರ ನಡೆ ನುಡಿ ವ್ಯಕ್ತಿತ್ವದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನವಲಗುಂದ ಗವಿಮಠ, ಹುಬ್ಬಳ್ಳಿಯ ಎರಡೆತ್ತಿನ ಮಠಕ್ಕೆ, ಜೋಶಿಯವರು ಅನುದಾನ ಕೊಟ್ಟಿಲ್ಲ. ಚುನಾವಣೆ ಬಂದಾಗ ಜೋಶಿಯವರು ಮಠಗಳನ್ನು ಮಾತ್ರ ಬಳಸಿಕೊಂಡು ಬಿಸಾಡುತ್ತಾ ಬಂದಿದ್ದಾರೆ. ಅಧಿಕಾರದ ಆಸೆ ನನಗಿಲ್ಲ ಎಂದ ದಿಂಗಾಲೇಶ್ವರ ಸ್ವಾಮೀಜಿ, ಅಧಿಕಾರದ ಮದ ಏರಿದವರನ್ನು ಕೆಳಗೆ ಇಳಿಸುವ ಕೆಲಸ ಮಾಡುತ್ತಿದ್ದೇವೆ ಎಂದರು. ಜೋಶಿಯವರನ್ನು ಬದಲಾವಣೆ ಮಾಡಬೇಕೆಂಬ ಗಟ್ಟಿ ನಿರ್ಧಾರ ಮಾಡಿದ್ದೇವೆ ಎಂದ ಸ್ವಾಮೀಜಿ, ಅಭ್ಯರ್ಥಿ ಬದಲಾವಣೆ ಮಾಡುವಂತೆ ಹೇಳಿದ್ದೆವು, ಆದರೆ ಅದು ಆಗಿಲ್ಲ ಎಂದರು. ಜೋಶಿಯವರ ನಡೆ ನುಡಿ, ವ್ಯಕ್ತಿತ್ವದ ವಿರುದ್ಧ ನನ್ನ ಹೋರಾಟ ಎಂದರು. ಜೋಶಿ ಲಿಂಗಾಯತರನ್ನು ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ ಎಂದರು. ಮಠಾಧೀಶರನ್ನು ಹೆದರಿಸುವ ಮಟ್ಟಕ್ಕೆ ಜೋಶಿ ಬೆಳೆದಿದ್ದಾರೆ ಎಂದು ಆರೋಪಿಸಿದರು.
ಧಾರವಾಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಬಗ್ಗೆ ಶೀಘ್ರದಲ್ಲಿ ಬೆಂಗಳೂರಿನಲ್ಲಿ ಪ್ರಕಟ ಮಾಡುವದಾಗಿ ಶ್ರೀಗಳು ಹೇಳಿದ್ದಾರೆ. ಇಂದು ನಡೆದ ಸಭೆಯಲ್ಲಿ ಭಕ್ತರು, ಶ್ರೀಗಳು ಪಕ್ಷೇತರರಾಗಿ ಸ್ಪರ್ಧೆ ಮಾಡಬೇಕೆಂದು ಒಕ್ಕೂರಲಿನ ನಿರ್ಣಯ ಮಂಡಿಸಿದ್ದಾರೆ.





