ಮಂಡ್ಯದಿಂದ ಸ್ಪರ್ಧೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು, ನಾಳೆ ಮಂಡ್ಯದಲ್ಲಿ ಸುಮಲತಾ ಅಂಬರೀಶ ತಮ್ಮ ಅಭಿಮಾನಿಗಳ ಸಭೆ ಕರೆದಿದ್ದಾರೆ. ಸ್ಪರ್ಧೆ ಮಾಡೋ ಬಗ್ಗೆ ಚರ್ಚಿಸಲು, ನಾಳೆ (ಏಪ್ರಿಲ್ 3) ಬೆಳಗ್ಗೆ 10 ಗಂಟೆಗೆ ಮಂಡ್ಯದ ಕಾಳಿಕಾಂಬಾ ದೇವಸ್ಥಾನದ ಆವರಣದಲ್ಲೇ ಸಭೆ ನಡೆಯಲಿದ್ದು, ಬೆಂಬಲಿಗರ ಅಭಿಪ್ರಾಯ ಕೇಳಿದ ನಂತರ, ತಮ್ಮ ನಿಲುವನ್ನು ಸ್ಪಷ್ಟಪಡಿಸುತ್ತಾರೆ.
ಮಂಡ್ಯ ಲೋಕಸಭೆ ಚುನಾವಣೆ ಕುರಿತಂತೆ ನನ್ನ ನಿರ್ಧಾರವನ್ನು ನಿಮ್ಮೆಲ್ಲರ ಮುಂದೆಯೇ ಪ್ರಕಟಿಸುತ್ತೆನೆ ಎಂದಿರುವ ಸುಮಲತಾ, ಅಭಿಮಾನಿಗಳ ಸಲಹೆ ಮತ್ತು ಸೂಚನೆ ಹಾಗೂ ಭಾವನೆಗಳಿಗೆ ಯಾವತ್ತೂ ನಾನು ನೋವು ತರಲಾರೆ ಎಂದಿದ್ದಾರೆ. ನಿಮ್ಮ ನಡೆಯೇ ನನ್ನದೂ ಆಗಿರಲಿದೆ.
ಬನ್ನಿ, ಜೊತೆಯಾಗಿ ಮಂಡ್ಯವನ್ನು ಮತ್ತಷ್ಟು ಅಭಿವೃದ್ದಿ ಪಡಿಸೋಣ ಎಂದು ಹೇಳಿರುವ ಸುಮಲತಾ, ನಾಳೆ ಚಿತ್ರನಟ ದರ್ಶನ, ಅಭಿಷೇಕ ಅಂಬರೀಶ, ನನ್ನ ಜೊತೆಗೆ ಬರಲಿದ್ದಾರೆ ಎಂದು ತಿಳಿಸಿದ್ದಾರೆ.
ನಾಳಿನ ಸುಮಲತಾ ಅಂಬರೀಶ ಸಭೆ ಕುತೂಹಲ ಮೂಡಿಸಿದ್ದು, ಮೈತ್ರಿಕೂಟದ ಅಭ್ಯರ್ಥಿಯಾಗಿರುವ ಎಚ್ ಡಿ ಕುಮಾರಸ್ವಾಮಿ ಪರ ನಿಲ್ತಾರೋ, ಇಲ್ಲವೇ ಮತ್ತೆ ಸ್ವಾಭಿಮಾನದ ಹೆಸರಲ್ಲಿ ಪಕ್ಷೇತರರಾಗಿ ಕಣ ಸಾರುತ್ತಾರೋ ಎಂದು ತಿಳಿಯಲು ಇನ್ನು ಕೆಲವೇ ಘಂಟೆ ಕಾಯಬೇಕಿದೆ.





