ಬೆಂಗಳೂರಿನ ವೈಟ್‌ಫೀಲ್ಡ್‌ನ ಐಟಿಪಿಎಲ್ ರಸ್ತೆಯಲ್ಲಿ ದಿನಾಂಕ 01.03.2024 ರಂದು ರಾಮೇಶ್ವರಂ ಕೆಫೆ ಸ್ಫೋಟದ ತನಿಖೆಯ ಭಾಗವಾಗಿ (RC-01/2024/NIA/BLR), IED ಸ್ಫೋಟವನ್ನು ನಡೆಸಿದ ಆರೋಪಿಯನ್ನು ಮುಸ್ಸಾವಿರ್ ಹುಸೇನ್ ಶಾಜಿಬ್ ಎಂದು NIA ಗುರುತಿಸಿದೆ. ಮತ್ತು ಸಹ-ಸಂಚುಕೋರ ಅಬ್ದುಲ್ ಮಥೀನ್ ತಾಹಾ ಎಂದು ಗುರುತಿಸಲಾಗಿದೆ. ಇಬ್ಬರೂ ಶಿವಮೊಗ್ಗದ ತೀರ್ಥಹಳ್ಳಿಯವರಾಗಿದ್ದಾರೆ.
ತನಿಖೆಯ ಭಾಗವಾಗಿ ಪ್ರಮುಖ ಆರೋಪಿಗಳಿಗೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಂಚರಿಸಲು ಬೆಂಬಲವನ್ನು ನೀಡಿದ ಆರೋಪದ ಮೇಲೆ ಚಿಕ್ಕಮಗಳೂರಿನ ಮುಝಮ್ಮಿಲ್ ಶರೀಫ್ ಆರ್/ಓ ಖಾಲ್ಸಾ ಎಂಬಾತನನ್ನು 26.03.2024 ರಂದು ಬಂಧಿಸಲಾಗಿದೆ.

ತಲೆಮರೆಸಿಕೊಂಡಿರುವ ಆರೋಪಿಗಳನ್ನು ಪತ್ತೆ ಹಚ್ಚುವ ಮತ್ತು ಬಂಧಿಸುವ ಪ್ರಯತ್ನಗಳ ಭಾಗವಾಗಿ, ಎನ್‌ಐಎ ಕರ್ನಾಟಕ, ತಮಿಳುನಾಡು ಮತ್ತು ಉತ್ತರ ಪ್ರದೇಶದ 18 ಸ್ಥಳಗಳಲ್ಲಿ ಶೋಧ ನಡೆಸಿದೆ. ಅಲ್ಲದೇ 29.03.2024 ರಂದು, ಪರಾರಿಯಾದ ಪ್ರತಿಯೊಬ್ಬರ ಮಾಹಿತಿ ನೀಡುವವರಿಗೆ ಹತ್ತು ಲಕ್ಷ ರೂಪಾಯಿಗಳ ಬಹುಮಾನಗಳನ್ನು ಘೋಷಿಸಲಾಗಿದೆ ಎಂದು ಎನ್ ಐ ಎ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.
ಪ್ರಕರಣದ ಸಾಕ್ಷ್ಯ ಮತ್ತು ಮಾಹಿತಿ ಸಂಗ್ರಹಿಸಲು ಎನ್‌ಐಎ ತಲೆಮರೆಸಿಕೊಂಡಿರುವ ಮತ್ತು ಬಂಧಿತ ಆರೋಪಿಗಳ ಕಾಲೇಜು ಮತ್ತು ಶಾಲಾ ಸಮಯದ ಸ್ನೇಹಿತರು ಸೇರಿದಂತೆ ಎಲ್ಲ ಪರಿಚಯಸ್ಥರನ್ನು ಕರೆಸಿ ವಿಚಾರಣೆ ನಡೆಸುತ್ತಿದೆ ಎಂದು ತಿಳಿಸಿದೆ
ಪ್ರಕರಣವು ಭಯೋತ್ಪಾದಕ ಘಟನೆಯಾಗಿರುವುದರಿಂದ, ಸಾಕ್ಷಿಗಳ ಗುರುತಿನ ಯಾವುದೇ ಮಾಹಿತಿಯು ತನಿಖೆಗೆ ಅಡ್ಡಿಯಾಗುವುದರ ಜೊತೆಗೆ ತನಿಖೆಗೆ ಅಪಾಯವನ್ನು ಉಂಟುಮಾಡಬಹುದು ಎಂದು ಹೇಳಿದೆ. ಪರಾರಿಯಾಗಿರುವ ವ್ಯಕ್ತಿಗಳನ್ನು ಬಂಧಿಸಲು ಎನ್‌ಐಎ ಎಲ್ಲರ ಸಹಕಾರ ಕೋರಿದೆ.





