ಉತ್ತರ ಕರ್ನಾಟಕದ ಮುಸ್ಲಿಮ್ ಸಮುದಾಯದಲ್ಲಿ ದೊಡ್ಡ ಹೆಸರು ಮಾಡುತ್ತಿದ್ದ ಇಸ್ಮಾಯಿಲ್ ತಮಟಗಾರ, ಆಡಿದ ಅದೊಂದು ಮಾತು ಅವರ ರಾಜಕೀಯ ಭವಿಷ್ಯಕ್ಕೆ ಬರೆ ನೀಡಿದೆ. ಆಳ, ಅಗಲ ಯೋಚಿಸದೆ ಇದೊಂದು ರಾಜಕೀಯ ಷಡ್ಯಂತ್ರ ಎಂಬ ಷರಾ ಬರೆಯಲಾಗುತ್ತಿದೆ.
ಧಾರವಾಡದ ಪ್ರತಿಷ್ಟಿತ ಅಂಜುಮನ್ ಇಸ್ಲಾಮ್ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ , ಸಣ್ಣ ವಯಸ್ಸಿನಲ್ಲಿಯೇ ರಾಜಕೀಯ ರಂಗ ಪ್ರವೇಶಿಸಿದವರು.
ಜೆಡಿಎಸ್ ನಿಂದ ರಾಜಕೀಯ ಆರಂಭ ಮಾಡಿದ್ದ ಇಸ್ಮಾಯಿಲ್, ಎರಡು ಬಾರಿ ಶಾಸಕ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದರು. ನಂತರ ಕಾಂಗ್ರೇಸ್ ಪಕ್ಷ ಸೇರಿದ್ದ ಇಸ್ಮಾಯಿಲ್, ಅಲ್ಲಿಯೂ ಟಿಕೆಟ್ ಗಿಟ್ಟಿಸಿ ಮತ್ತೆ ಸ್ಪರ್ಧೆ ಮಾಡಿದ್ದರು. ಆದರೆ ಇಸ್ಮಾಯಿಲ್ ಗೆ ಅದೃಷ್ಟ ಕೈ ಹಿಡಿಯಲಿಲ್ಲ. ಆದರೆ ಇಸ್ಮಾಯಿಲ್, ಸಮುದಾಯದ ಮೇಲೆ ಉತ್ತಮ ಹಿಡಿತ ಸಾಧಿಸಿದ್ದರು.
ಒಮ್ಮೆ ಚುನಾವಣೆ ನಡೆದು ಅಂಜುಮನ್ ಅಧ್ಯಕ್ಷರಾಗಿದ್ದ ಅವರು, ಎರಡನೇ ಬಾರಿ ಅವಿರೋಧವಾಗಿ ಆಯ್ಕೆಯಾಗಿ ಎಲ್ಲರ ಗಮನ ಸೆಳೆದಿದ್ದರು.
ಯುವ ಕಾಂಗ್ರೇಸ್ ಮುಖಂಡ ಫೈರೋಜ್ ಪಠಾಣ ಕೊಲೆಯಲ್ಲಿ ಅವರ ಹೆಸರು ಕೇಳಿ ಬಂದರು FIR ನಲ್ಲಿ ಅವರ ಹೆಸರು ಇದುವರೆಗೂ ಧಾಖಲು ಆಗಿಲ್ಲ.
ಇಸ್ಮಾಯಿಲ್ ಹೇಳಿದ ಅದೊಂದು ಮಾತಿನ ಮೇಲೆ, ಇದೀಗ ಕೊಲೆಯಲ್ಲಿ ಅವರ ಪಾತ್ರ ಇದೆಯಾ ಇಲ್ಲವೋ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಲು ಪೊಲೀಸ್ ಇಲಾಖೆ ಅವರಿಗೆ ಬುಲಾವ್ ನೀಡಿದೆ.
ಪೊಲೀಸರು ಸರ್ಚ್ ವಾರೆಂಟ್ ಮೇಲೆ ಅವರ ಮನೆ ಹಾಗೂ ಅಂಜುಮನ್ ಸಂಸ್ಥೆಯ ಆವರಣದಲ್ಲಿ ಅವರಿಗಾಗಿ ಹುಡುಕಾಟ ನಡೆಸಿಯಾಗಿದೆ.
ಇಸ್ಮಾಯಿಲ್ ಆಡಿದ ಅದೊಂದು ಮಾತು, ದೊಡ್ಡ ಮಟ್ಟದಲ್ಲಿ ಸಂಚಲನ ಮೂಡಿಸಿದೆ. ಪಕ್ಷದಲ್ಲಿ ಸಹಜ ಎಂಬಂತೆ ಕೆಲ ವಿರೋದಿಗಳನ್ನು ಕಟ್ಟಿಕೊಂಡಿದ್ದ ಇಸ್ಮಾಯಿಲ್ ತಮಟಗಾರ, ಸಮಾಧಾನದಿಂದ ಹೋಗಬೇಕಿತ್ತು. ಎಲ್ಲದಕ್ಕೂ ಪರಿಹಾರ ಸಿಗುತ್ತಿತ್ತು.
ತಿಳಿದು ಅಥವಾ ತಿಳಿಯದಯೋ ಆಡಿದ ಮಾತಿಗೆ, ಒಂದು ವಿಷಾಧ ವ್ಯಕ್ತಪಡಿಸಿದ್ದರೆ, ಆ ವಿಷಯ ಮುಗಿದು ಹೋಗುತ್ತಿತ್ತು. ಅಷ್ಟರಲ್ಲಿ ಫೈರೋಜ್ ಪಠಾಣ ಹೆಣ ಬಿದ್ದು ಹೋಗಿದೆ. ಫೈರೋಜನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.
ಇದೀಗ ಇಸ್ಮಾಯಿಲ್ ತಮಟಗಾರರನ್ನು ಪೂಲೀಸರು ತನಿಖೆಗೆ ಕರೆದಿದ್ದಾರೆ. ಅವರು ನ್ಯಾಯಸಮ್ಮತ ತನಿಖೆಗೆ ಸಹಕರಿಸಬೇಕಿದೆ.
ಸಣ್ಣ ವಯಸ್ಸಿನಲ್ಲಿಯೇ ದೊಡ್ಡ ಹೆಸರು ಮಾಡಿದ್ದ ಇಸ್ಮಾಯಿಲ್ ಮೇಲೆ ಬಂದಿರುವ ಗುರುತರ ಆರೋಪಗಳ ಬಗ್ಗೆ ಅವರೇ ಸ್ಪಷ್ಟನೆ ನೀಡಬೇಕು. ಕೊಲೆಯಾದ ಫೈರೋಜನ ಕುಟುಂಬಕ್ಕೂ ನ್ಯಾಯ ಸಿಗಬೇಕು.
ಇಸ್ಮಾಯಿಲ್ ತಮಟಗಾರ ಅವರ ರಾಜಕೀಯ ವಿರೋಧಿಗಳು, ಸಿಕ್ಕಿರುವ ಅವಕಾಶವನ್ನು ಬಳಸಿಕೊಳ್ಳುವದರ ಜೊತೆಗೆ ಇದೇ ಸರಿಯಾದ ಸಮಯ ಅನ್ನೋ ಲೆಕ್ಕದಲ್ಲಿ ಹಳೆಯ ಬಾಕಿಯನ್ನೆಲ್ಲ ಚುಕ್ತಾ ಮಾಡಿಕೊಳ್ಳುವ ತವಕದಲ್ಲಿರುವದು ಕಂಡು ಬರುತ್ತಿದೆ.
ರಾಜಕೀಯ ವೈರುದ್ಯ, ವಿರೋಧಗಳು ಏನೇ ಇರಲಿ, ಸಮಾಜದಲ್ಲಿ ಬಾಳಿ ಬದುಕಬೇಕಿದ್ದ ಯುವಕನೊಬ್ಬನ ಕೊಲೆ ಮಾಡಿದ ಹಂತಕರಿಗೆ ಶಿಕ್ಷೆಯಾಗಲಿ.




