ಧಾರವಾಡದ ಐಐಟಿ ಬಳಿ ಹುಬ್ಬಳ್ಳಿಯ ಡೆವಲಪರ್ ಒಬ್ಬ, ತನ್ನ ಖಾಸಗಿ ಗನ್ ಮ್ಯಾನ್ ಹತ್ತಿರವಿದ್ದ, ರಿವಾಲ್ವರ ಇಸಿದುಕೊಂಡು ಫೈರಿಂಗ್ ಮಾಡಿದ ಪರಿಣಾಮ, ತಡಸಿನಕೊಪ್ಪದ ವಿಠ್ಠಲ್ ವಾಲಿಕಾರನ ಕಾಲಿಗೆ ಗುಂಡು ಬಿದ್ದಿದೆ.
ಗಿರೀಶ್ ನೀಲಕಂಠಪ್ಪ ದೊಡ್ಡಮನಿ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಈ ಗುಂಡಿನದಾಳಿ ನಡೆದಿದೆ.
ಗಿರೀಶ್, ವಿಠ್ಠಲ್ ವಾಲಿಕಾರನಿಗೆ 5 ಏಕರೆ ಜಮೀನಿನ ಪೈಕಿ ಎರಡು ಏಕರೆ ಜಮೀನು ನೀಡಬೇಕಿತ್ತಂತೆ. ಹುಬ್ಬಳ್ಳಿಯ ಡೆವಲಪರ್ ಒಬ್ಬ, ಜಮೀನು ಮಾಲೀಕ ಗಿರೀಶ್ ನ ಜೊತೆ, ತನ್ನ ಇಬ್ಬರು ಖಾಸಗಿ ಗನ್ ಮ್ಯಾನ್ ಕರೆದುಕೊಂಡು ಬಂದು, ಜಮೀನನ್ನು ಸಮತಟ್ಟು ಮಾಡುತ್ತಿದ್ದ ಎನ್ನಲಾಗಿದೆ.
ಈ ವಿಷಯ ತಿಳಿದು ಸ್ಥಳಕ್ಕೆ ಬಂದ ವಿಠ್ಠಲ್ ವಾಲಿಕಾರ, ತನಗೆ ಇದರಲ್ಲಿ ಎರಡು ಏಕರೆ ಜಮೀನಿದೆ. ತನ್ನ ಎರಡು ಏಕರೆ ಜಮೀನು ಬಿಟ್ಟು, ನಿಮ್ಮ ಜಮೀನಿನಲ್ಲಿ ಕೆಲಸ ಮಾಡಿ ಎಂದು ಹೇಳಿದ್ದಾನೆ.
ಈ ನಡುವೆ ಎರಡು ಕಡೆ ಮಾತಿಗೆ ಮಾತು ಬೆಳೆದು ತಳ್ಳಾಟ, ನೂಕಾಟ ನಡೆದಿದೆ. ಈ ವೇಳೆ ಡೆವಲಪರ್, ಖಾಸಗಿ ಗನ್ ಮ್ಯಾನ್ ಕಡೆ ಇದ್ದ ರಿವಾಲ್ವರ ಇಸಿದುಕೊಂಡು ಹಾರಿಸಿದ ಗುಂಡು ವಿಠ್ಠಲ್ ನ ಕಾಲಿಗೆ ಹೊಕ್ಕು ಹೊರಗೆ ಬಂದಿದೆ.
ವೈರಲ್ ಆದ ವಿಡಿಯೋದಲ್ಲಿ ಎರಡು ಸುತ್ತು ಗುಂಡು ಹಾರಿದ ಬಗ್ಗೆ ದೃಶ್ಯಗಳು ಸಾಕ್ಷ್ಯ ಹೇಳುತ್ತವೆ.
ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಗಾಯಾಳುವನ್ನು ಖಾಸಗಿ ಆಸ್ಪತ್ರೆಗೆ ಧಾಖಲಿಸಿದ್ದಾರೆ.
ಆಸ್ಪತ್ರೆಗೆ ಭೇಟಿ ನೀಡಿದ ಪೊಲೀಸ್ ಆಯುಕ್ತ ಶಶಿಕುಮಾರ, ಗಾಯಾಳುವನ್ನು ಭೇಟಿಯಾಗಿ ಮಾಹಿತಿ ಸಂಗ್ರಹಿಸಿದ್ದಾರೆ.
ಧಾರವಾಡದಲ್ಲಿ ಲ್ಯಾಂಡ್ ಮಾಫಿಯಾ ಹಾವಳಿ ಜೋರು. ಖಾಸಗಿ ಗನ್ ಮ್ಯಾನ್ ಇಟ್ಟುಕೊಂಡು ದರ್ಪ
ಧಾರವಾಡದ ತಡಸಿನಕೊಪ್ಪ ಗ್ರಾಮದಲ್ಲಿ ಭೂಮಿಗೆ ಬಂಗಾರದ ಬೆಲೆ ಬರುತ್ತಿದ್ದಂತೆ, ಲ್ಯಾಂಡ್ ಮಾಫಿಯಾ ಕಣ್ಣು ಈ ಭೂಮಿಯ ಮೇಲೆ ಬಿದ್ದಿದೆ.
ಅಲ್ಪ ಸ್ವಲ್ಪ ತಕರಾರು ಇರುವ ಭೂಮಿಯನ್ನು ಜಿಪಿಎ ಮಾಡಿಸಿಕೊಳ್ಳುವ ಲ್ಯಾಂಡ್ ಮಾಫಿಯಾದವರು, ಖಾಸಗಿ ಗನ್ ಮ್ಯಾನ್ ಇಟ್ಟುಕೊಂಡು ದರ್ಪ ಮೆರೆಯುವದು ಸರ್ವೆ ಸಾಮಾನ್ಯವಾಗಿದೆ.
ವಿದ್ಯಾಗಿರಿ ಠಾಣೆ ವ್ಯಾಪ್ತಿಯಲ್ಲಂತೂ ಈ ತರದ ಪ್ರಕರಣಗಳು ಪ್ರತಿ ದಿನ ನಡೆಯುತ್ತಿರುವದು ಆತಂಕಕ್ಕೆ ಕಾರಣವಾಗಿದೆ.
ಹುಬ್ಬಳ್ಳಿಯ ಡೆವಲಪರ್ ನ ಗನ್ ಮ್ಯಾನ್ ನ ಗುಂಡು ಹಾರಿಸಿದ್ದಾನೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ ಹೇಳಿದರೆ, ವೈರಲ್ ಆದ ವಿಡಿಯೋಗಳು ಬೇರೆ ಕಥೆ ಹೇಳುತ್ತಿವೆ.
ಅಸಲಿ ಆರೋಪಿಯನ್ನು ಬಚಾವ್ ಮಾಡಲು ವಿದ್ಯಾಗಿರಿ ಠಾಣೆಯವರು ಕಥೆ ಹೆಣದರಾ ಅನ್ನೋ ಅನುಮಾನ ಕಾಡುತ್ತಿದೆ.
ಗುಂಡು ಹಾರಿಸಿದವನನ್ನು ಬಿಟ್ಟು, ಖಾಸಗಿ ಗನ್ ಮ್ಯಾನ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗಾಯಾಳು ಹೇಳಿಕೆಯನ್ನು ಧಾಖಲಿಸಿಕೊಳ್ಳಲಾಗುತ್ತಿದ್ದು, ಹುಬ್ಬಳ್ಳಿಯ ಪ್ರಖ್ಯಾತ ಡೆವಲಪರ್ ಈ ಕೃತ್ಯದಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ ಎನ್ನಲಾಗಿದೆ.
ಧಾರವಾಡದಲ್ಲಿ ಹುಬ್ಬಳ್ಳಿ ರೌಡಿಗಳ ಹಾವಳಿ
ಧಾರವಾಡದಲ್ಲಿ ಇತ್ತೀಚಿಗೆ ಹುಬ್ಬಳ್ಳಿಯಿಂದ ಬರುವ ರೌಡಿಗಳ ಹಾವಳಿ ಜೋರಾಗಿದ್ದು, ಶಾಂತಿಯ ನಗರಕ್ಕೆ ಭಂಗ ತರುತ್ತಿದ್ದಾರೆ. ಇಲ್ಲಿನ ಜಮೀನುಗಳ ಮೇಲೆ ಲ್ಯಾಂಡ್ ಮಾಫಿಯಾದವರ ಕಣ್ಣು ಬಿದ್ದಿದೆ.
ಧಾರವಾಡಕ್ಕೆ ಕಾಲಿಟ್ಟ ಗನ್ ಮ್ಯಾನ್ ಸಂಸ್ಕೃತಿ
ಬಹುತೇಕ ಲ್ಯಾಂಡ್ ಡೀಲಿಂಗ ಮಾಡುವವರು ಇತ್ತೀಚಿಗೆ ಖಾಸಗಿ ಗನ್ ಮ್ಯಾನ ಗಳನ್ನು ಇಟ್ಟುಕೊಂಡು ತಿರುಗಾಡುತ್ತಿದ್ದಾರೆ. ಬಿಲ್ಡಪ್ ಕೊಡುವ ಅವರು ಭಯ ಹುಟ್ಟಿಸುತ್ತಿದ್ದಾರೆ. ಧಾರವಾಡಕ್ಕೆ ಗನ್ ಮ್ಯಾನ್ ಸಂಸ್ಕೃತಿ ಕಾಲಿಟ್ಟಿರುವದು ಆತಂಕ ಮೂಡಿಸಿದೆ.





