ಬೆಳಿಗ್ಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರ ಮೇಲೆ ಶೂ ಎಸೆಯಲು ಮುಂದಾಗಿದ್ದ ವಕೀಲ ರಾಕೇಶ್ ಕಿಶೋರ್ ಎನ್ನುವಾತ ವಕೀಲಿಕೆಯಲ್ಲಿ ತೊಡಗಲು ಸಾಧ್ಯವಾಗದಂತೆ ತಕ್ಷಣದಿಂದ ಜಾರಿಗೆ ಬರುವಂತೆ ಭಾರತೀಯ ವಕೀಲರ ಪರಿಷತ್ತು (ಬಿಸಿಐ) ಅಮಾನತುಗೊಳಿಸಿದೆ.
ಬಿಸಿಐ ಹೊರಡಿಸಿರುವ ಮಧ್ಯಂತರ ಆದೇಶದ ಪ್ರಕಾರ ದೆಹಲಿ ವಕೀಲರ ಪರಿಷತ್‌ನಲ್ಲಿ ನೋಂದಾಯಿಸಿಕೊಂಡಿರುವ ಕಿಶೋರ್ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದಾಗ ತನ್ನ ಶೂ ತೆಗೆದು ಸಿಜೆಐ ಗವಾಯಿ ಅವರತ್ತ ಎಸೆಯಲು ಮುಂದಾದ.
ಆದರೆ ಆತನನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದು ನ್ಯಾಯಾಲಯದಿಂದ ಹೊರಗೆ ಎಳೆದೊಯ್ದರು.
ವಕೀಲರ ಕಾಯಿದೆ 1961 ಮತ್ತು ವೃತ್ತಿಪರ ನಡವಳಿಕೆ ಮತ್ತು ಶಿಷ್ಟಾಚಾರ ಮಾನದಂಡಗಳ ಕುರಿತಂತೆ ಬಿಸಿಐ ರೂಪಿಸಿರುವ ನಿಯಮದ ಪ್ರಕಾರ ಹೊರಡಿಸಲಾಗಿರುವ ಮಧ್ಯಂತರ ಅಮಾನತು ಆದೇಶಕ್ಕೆ ಬಿಸಿಐ ಅಧ್ಯಕ್ಷ ಮತ್ತು ಹಿರಿಯ ವಕೀಲ ಮನನ್ ಕುಮಾರ್ ಮಿಶ್ರಾ ಸಹಿ ಹಾಕಿದ್ದಾರೆ .
ಅಮಾನತು ಅವಧಿಯಲ್ಲಿ, ಕಿಶೋರ್ ಭಾರತದ ಯಾವುದೇ ನ್ಯಾಯಾಲಯ, ನ್ಯಾಯಮಂಡಳಿ ಅಥವಾ ಪ್ರಾಧಿಕಾರದ ಮುಂದೆ ಹಾಜರಾಗುವುದು, ಕಾರ್ಯನಿರ್ವಹಿಸುವುದು, ವಾದಿಸುವುದು ಅಥವಾ ವಕಾಲತ್ತು ವಹಿಸದಂತೆ ನಿಷೇಧ ವಿಧಿಸಲಾಗಿದೆ. ಆತನ ವಕಾಲತ್ತು ಹಕ್ಕು ಅಮಾನತುಗೊಂಡಿರುವನದನು ಎಲ್ಲಾ ನ್ಯಾಯಾಲಯಗಳಿಗೆ ತಿಳಿಸುವಂತೆ ದೆಹಲಿ ವಕೀಲರ ಪರಿಷತ್‌ಗೆ ಬಿಸಿಐ ಸೂಚಿಸಿದೆ.





