ಹುಬ್ಬಳ್ಳಿಯ ಗುಜರಾತ್ ಭವನದ ಬಳಿ ನಡೆಯುತ್ತಿದ್ದ ಕಾಮಗಾರಿ ವೇಳೆ ನವಲಗುಂದ ವಿಧಾನಸಭಾ ಕ್ಷೇತ್ರದ ಹಳ್ಳಿಕೇರಿ ಗ್ರಾಮದ ಮಲ್ಲಪ್ಪ ಜೋಗಿನ ಎಂಬ ಕಾರ್ಮಿಕ ಮೃತಪಟ್ಟಿರುವುದು ತೀವ್ರ ಬೇಸರದ ಸಂಗತಿಯಾಗಿದೆ ಎಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಕಳವಳ ವ್ಯಕ್ತಪಡಿಸಿದ್ದಾರೆ.
ಈ ದುರ್ಘಟನೆಯ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಗುತ್ತಿಗೆದಾರರ ನಿರ್ಲಕ್ಷ್ಯದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಜೀವದ ಜೊತೆ ಚೆಲ್ಲಾಟವಾಡುವುದು ಸರಿಯಲ್ಲ ಎಂದಿರುವ ಅವರು ”ಬದುಕಿನ ಆಸರೆಗಾಗಿ, ಜೀವನ ನಿರ್ವಹಣೆಗಾಗಿ ಕೆಲಸಕ್ಕೆ ಬರುವ ಬಡ ಕಾರ್ಮಿಕರ ಸುರಕ್ಷತೆಯ ಬಗ್ಗೆ ಗುತ್ತಿಗೆದಾರರು ಕಟ್ಟುನಿಟ್ಟಿನ ಜಾಗ್ರತೆ ವಹಿಸಬೇಕು. ಅದನ್ನು ಬಿಟ್ಟು ಈ ರೀತಿ ಅಮಾಯಕರ ಜೀವದ ಜೊತೆ ಚೆಲ್ಲಾಟವಾಡುವುದು ಸರಿಯಲ್ಲ ಎಂದರು.
ಈ ಘಟನೆಗೆ ಕಾರಣರಾದವರು ಯಾರೇ ಇರಲಿ, ಅವರ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ಜರುಗಿಸಬೇಕು” ಎಂದು ಮುನೇನಕೊಪ್ಪ ಒತ್ತಾಯಿಸಿದ್ದಾರೆ.
ಮೃತರ ಕುಟುಂಬಕ್ಕೆ ಈ ಆಘಾತವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸಿರುವ ಅವರು, ನೊಂದ ಕುಟುಂಬಕ್ಕೆ ತಕ್ಷಣವೇ ಗುತ್ತಿಗೆದಾರರಿಂದ ಸೂಕ್ತ ಪರಿಹಾರ ಕೊಡಿಸಬೇಕು ಹಾಗೂ ಸರ್ಕಾರದ ವತಿಯಿಂದಲೂ ಜಂಟಿಯಾಗಿ ಪರಿಹಾರ ಧನ ಬಿಡುಗಡೆ ಮಾಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳನ್ನು ಹಾಗೂ ಸರ್ಕಾರವನ್ನು ಆಗ್ರಹಿಸಿದ್ದಾರೆ.





