Download Our App

Follow us

Home » ಕರ್ನಾಟಕ » ನವಲಗುಂದ ನರಗುಂದ ರೈತ ಬಂಡಾಯಕ್ಕೆ 46 ವರ್ಷ ಪೂರ್ಣ : ರೈತರ ಪಾದಕ್ಕೆ ಶರಣಾಗಿದ್ದ ಕಾಂಗ್ರೇಸ್ ಸರ್ಕಾರ : ಅಂದು ನಡೆದಿದ್ದು ಏನು? ಇಲ್ಲಿದೆ ಡಿಟೇಲ್ ಸ್ಟೋರಿ

ನವಲಗುಂದ ನರಗುಂದ ರೈತ ಬಂಡಾಯಕ್ಕೆ 46 ವರ್ಷ ಪೂರ್ಣ : ರೈತರ ಪಾದಕ್ಕೆ ಶರಣಾಗಿದ್ದ ಕಾಂಗ್ರೇಸ್ ಸರ್ಕಾರ : ಅಂದು ನಡೆದಿದ್ದು ಏನು? ಇಲ್ಲಿದೆ ಡಿಟೇಲ್ ಸ್ಟೋರಿ

ನವಲಗುಂದ ನರಗುಂದ ರೈತ ಬಂಡಾಯ ನಡೆದು ಇವತ್ತಿಗೆ 46 ವರ್ಷಗಳು ಪೂರ್ಣಗೊಂಡಿವೆ. ಪ್ರತಿ ವರ್ಷ ಜುಲೈ 21 ರಂದು ರೈತರು, ಈ ದಿನವನ್ನು ರೈತ ಹುತಾತ್ಮ ದಿನಾಚರಣೆ ಎಂದು ಆಚರಿಸಿಕೊಂಡು ಬರುತ್ತಿದ್ದಾರೆ.
ರಾಜ್ಯದಲ್ಲಿ ರೈತ ಸಂಘದ ಉದಯಕ್ಕೆ ಕಾರಣವಾಗಿ, ರಾಜ್ಯದಲ್ಲಿ ಕಾಂಗ್ರೇಸ್ಸೇತರ ಸರ್ಕಾರ ಬರಲು ಕಾರಣವಾದ ನವಲಗುಂದ ನರಗುಂದ ರೈತ ಬಂಡಾಯದ ಇತಿಹಾಸದ ಬಗ್ಗೆ ಕರ್ನಾಟಕ ಫೈಲ್ಸ್ ಡಿಟೇಲ್ ಸುದ್ದಿಯನ್ನು ನಿಮ್ಮ ಕೈಗೆ ಇಡುತ್ತಿದೆ.
ಜುಲೈ 21, 1980 ರಂದು ನವಲಗುಂದ ನರಗುಂದದಲ್ಲಿ ಏನಾಗಿತ್ತು 
ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರ ಪ್ರತಿಭಟನೆ 1980 ರ ಜುಲೈ 21 ರಂದು ತೀವ್ರ ಹಿಂಸಾಚಾರಕ್ಕೆ ತಿರುಗಿತ್ತು.
ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ನಡೆಸಿದ ಗೋಲಿಬಾರ್‌ನಲ್ಲಿ ಇಬ್ಬರು ರೈತರು ಸಾವನ್ನಪ್ಪಿದ್ದರು. ಮತ್ತು ಹಲವರು ಗಂಭೀರವಾಗಿ ಗಾಯಗೊಂಡಿದ್ದರು.
ಉದ್ರಿಕ್ತ ರೈತರ ಗುಂಪು ಮತ್ತು ಪೊಲೀಸರ ನಡುವೆ ನಡೆದ ಸಂಘರ್ಷದಲ್ಲಿ ಮೂವರು ಪೊಲೀಸ್ ಅಧಿಕಾರಿಗಳು ಸಹ ಮೃತಪಟ್ಟಿದ್ದರು.
ಮುಂಜಾಗ್ರತಾ ಕ್ರಮವಾಗಿ ಇಡೀ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ನವಲಗುಂದ, ನರಗುಂದ ಮತ್ತು ಗದಗ ಪಟ್ಟಣಗಳಲ್ಲಿ ರಾತ್ರಿ ಕರ್ಫ್ಯೂ ಹೇರಲಾಗಿತ್ತು.
      ಘಟನೆಯ ಹಿನ್ನೆಲೆ
(ಬೆಟರ್‌ಮೆಂಟ್ ಲೆವಿಗೆ ವಿರೋಧ)
ಬೆಳಗಾವಿ ಜಿಲ್ಲೆಯ ಸವದತ್ತಿ ಬಳಿ ಮಲಪ್ರಭಾ ಆಣೆಕಟ್ಟು (ನವಿಲುತೀರ್ಥ) ನಿರ್ಮಾಣವಾದ ನಂತರ, ಅಂದಿನ ಆರ್. ಗುಂಡೂರಾವ್ ನೇತೃತ್ವದ ಸರ್ಕಾರವು ರೈತರ ಭೂಮಿಗೆ ಪ್ರತಿ ಎಕರೆಗೆ 1,500 ರೂಪಾಯಿಗಳ ‘ಬೆಟರ್‌ಮೆಂಟ್ ಲೆವಿ’ (ಅಭಿವೃದ್ಧಿ ಕರ) ಮತ್ತು ನೀರು ತೆರಿಗೆಯನ್ನು ಕಡ್ಡಾಯವಾಗಿ ವಸೂಲಿ ಮಾಡಲು ಆದೇಶಿಸಿತ್ತು.
ಆದರೆ, ಸಮರ್ಪಕ ಯೋಜನೆಯಿಲ್ಲದ ಕಾರಣ ನವಲಗುಂದ ಮತ್ತು ನರಗುಂದ ಭಾಗದ ಹೆಚ್ಚಿನ ರೈತರ ಜಮೀನುಗಳಿಗೆ ನೀರೇ ತಲುಪಿರಲಿಲ್ಲ. “ನೀರನ್ನೇ ಕೊಡದೆ ಕರ ವಸೂಲಿ ಮಾಡುವುದನ್ನು ನಿಲ್ಲಿಸಿ” ಎಂದು ಆಗ್ರಹಿಸಿ ತಹಶೀಲ್ದಾರ್ ಕಚೇರಿಗಳ ಮುಂದೆ ರೈತರು ಹಲವು ದಿನಗಳಿಂದ ಶಾಂತಿಯುತ ಧರಣಿ ನಡೆಸುತ್ತಿದ್ದರು.
           ಜುಲೈ 21 ರಂದು ನಡೆದಿದ್ದೇನು?
     ಕಚೇರಿಗಳ ಬಂದ್ ಮತ್ತು ಮುತ್ತಿಗೆ
ಸರ್ಕಾರದ ಕಡ್ಡಾಯ ವಸೂಲಾತಿ ಕ್ರಮದಿಂದ ಆಕ್ರೋಶಗೊಂಡ ರೈತರು ಜುಲೈ 21 ರಂದು ಸರ್ಕಾರಿ ಕಚೇರಿಗಳನ್ನು ಬಂದ್ ಮಾಡಲು ನಿರ್ಧರಿಸಿ ಮುತ್ತಿಗೆ ಹಾಕಿದ್ದರು.
ನರಗುಂದ ಮತ್ತು ನವಲಗುಂದದಲ್ಲಿ  ಸಾವಿರಾರು ರೈತರು ಏಕಕಾಲದಲ್ಲಿ ಬೀದಿಗಿಳಿದಿದ್ದರಿಂದ ವಾತಾವರಣ ಬಿಗುವಿನಿಂದ ಕೂಡಿತ್ತು. ಕಚೇರಿಗಳ ಎದುರು ಕುಳಿತಿದ್ದ ಉದ್ರಿಕ್ತ ಜನರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು ಕಲ್ಲು ತೂರಾಟ ಆರಂಭವಾಗಿತ್ತು.
ನಡೆದು ಹೋಯ್ತು ಪೊಲೀಸ್ ಗೋಲಿಬಾರ್
ಮುತ್ತಿಗೆ ಹಾಕಿದ ಬೃಹತ್ ಜನಸ್ತೋಮವನ್ನು ಚದುರಿಸಲು ಪೊಲೀಸರು ಮೊದಲು ಲಾಠಿ ಪ್ರಹಾರ ಮತ್ತು ಅಶ್ರುವಾಯು ಬಳಸಿದರು. ಪರಿಸ್ಥಿತಿ ಕೈಮೀರಿದಾಗ ಪೊಲೀಸರು ನೇರ ಗೋಲಿಬಾರ್ ನಡೆಸಿದರು. ಇದರಿಂದ ರೈತರು ಮತ್ತಷ್ಟು ಉದ್ರಿಕ್ತಗೊಂಡರು.
          ಇಬ್ಬರು ರೈತರ ಸಾವು
ಈ ಗೋಲಿಬಾರ್‌ನಲ್ಲಿ ನವಲಗುಂದ ತಾಲೂಕಿನ ಅಳಗವಾಡಿ ಗ್ರಾಮದ ಬಸಪ್ಪ ಲಕ್ಕುಂಡಿ ಮತ್ತು ನರಗುಂದ ತಾಲೂಕಿನ ಚಿಕ್ಕನರಗುಂದ ಗ್ರಾಮದ ವೀರಪ್ಪ ಕಾಡ್ಲಿಕೊಪ್ಪ ಎಂಬ ಇಬ್ಬರು ರೈತರು ಗುಂಡೇಟಿಗೆ ಬಲಿಯಾದರು. ರೈತರ ಬಲಿ ಪಡೆದುಕೊಂಡ ಸರ್ಕಾರದ ವಿರುದ್ಧ ರೈತರು ನೇರ ಸಂಘರ್ಷಕ್ಕೆ ಇಳಿದರು. ಪ್ರತಿಕಾರಕ್ಕೆ ಸಜ್ಜಾದರು.
      ಪ್ರತೀಕಾರ ಮತ್ತು ಹಿಂಸಾಚಾರ
ರೈತರ ಸಾವಿನ ಸುದ್ದಿ ಹರಡುತ್ತಿದ್ದಂತೆ ಆಕ್ರೋಶದ ಕಟ್ಟೆಯೊಡೆದು, ಉದ್ರಿಕ್ತ ಗುಂಪು ಪೊಲೀಸ್ ಅಧಿಕಾರಿಗಳ ಮೇಲೆ ತಿರುಗಿಬಿದ್ದಿತು.
ಈ ಸಂಘರ್ಷದಲ್ಲಿ ನರಗುಂದ ಸಬ್ ಇನ್ಸ್‌ಪೆಕ್ಟರ್ ಸಿಕಂದರ್ ಬಾಬಾಲಾಲ್ ಪಟೇಲ್, ಡಿಎಆರ್ ಎಸ್‌ಐ ಬಸಯ್ಯ ಹಿರೇಮಠ ಮತ್ತು ಎಎಸ್‌ಐ ನಾಗಪ್ಪ ಅಕ್ಕಿ ಸೇರಿದಂತೆ ಮೂವರು ಪೊಲೀಸರು ಸಾವನ್ನಪ್ಪಿದರು.
   ರಾಜ್ಯಾದ್ಯಂತ ಆಕ್ರೋಶ ಸ್ಫೋಟ 
ರೈತರ ಮೇಲಿನ ಗೋಲಿಬಾರ್ ಖಂಡಿಸಿ ಇಡೀ ಕರ್ನಾಟಕದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು. ಮಂಡ್ಯ, ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ರೈತ ಸಂಘಟನೆಗಳು ತುರ್ತು ಸಭೆ ನಡೆಸಿ ಸರ್ಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿದರು
   ಘಟನೆಯ ನಂತರದ ಇತಿಹಾಸ
ಈ ರಕ್ತಸಿಕ್ತ ಹೋರಾಟದ ನಂತರವೇ ಕರ್ನಾಟಕದಲ್ಲಿ ಸುಸಜ್ಜಿತ ‘ಕರ್ನಾಟಕ ರಾಜ್ಯ ರೈತ ಸಂಘ’ (KRRS) ಅಧಿಕೃತವಾಗಿ ಉದಯಿಸಿತು.
ಈ ರೈತ ಬಂಡಾಯದ ತೀವ್ರತೆಗೆ ಅಂದಿನ ಆರ್. ಗುಂಡೂರಾವ್ ಸರ್ಕಾರ ಪತನಗೊಂಡು ಮುಂದೆ ರಾಮಕೃಷ್ಣ ಹೆಗಡೆ ನೇತೃತ್ವದ ಮೊದಲ ಕಾಂಗ್ರೆಸ್ಸೇತರ ಸರ್ಕಾರ ಅಧಿಕಾರಕ್ಕೆ ಬರಲು ದಾರಿಯಾಯಿತು. ರೈತ ಬಂಡಾಯಕ್ಕೆ ಆರ್ ಗುಂಡೂರಾವ್ ನೇತೃತ್ವದ ಸರ್ಕಾರ, ರೈತರ ಪಾದಕ್ಕೆ ಶರಣಾಯಿತು.
ಪ್ರತಿ ವರ್ಷ ಜುಲೈ 21 ರಂದು ಕರ್ನಾಟಕದಲ್ಲಿ ‘ರೈತ ಹುತಾತ್ಮರ ದಿನ’ ಎಂದು ಆಚರಿಸಿ, ಹುತಾತ್ಮ ರೈತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ.
ಮುಸ್ತಫಾ ಕುನ್ನಿಭಾವಿ
ಕರ್ನಾಟಕ ಫೈಲ್ಸ್ ಕಾಮ್
Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ ನರಗುಂದ ರೈತ ಬಂಡಾಯಕ್ಕೆ 46 ವರ್ಷ ಪೂರ್ಣ : ರೈತರ ಪಾದಕ್ಕೆ ಶರಣಾಗಿದ್ದ ಕಾಂಗ್ರೇಸ್ ಸರ್ಕಾರ : ಅಂದು ನಡೆದಿದ್ದು ಏನು? ಇಲ್ಲಿದೆ ಡಿಟೇಲ್ ಸ್ಟೋರಿ

ನವಲಗುಂದ ನರಗುಂದ ರೈತ ಬಂಡಾಯ ನಡೆದು ಇವತ್ತಿಗೆ 46 ವರ್ಷಗಳು ಪೂರ್ಣಗೊಂಡಿವೆ. ಪ್ರತಿ ವರ್ಷ ಜುಲೈ 21 ರಂದು ರೈತರು, ಈ ದಿನವನ್ನು ರೈತ ಹುತಾತ್ಮ ದಿನಾಚರಣೆ

Live Cricket

error: Content is protected !!