ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ವಿನಯ ಕುಲಕರ್ಣಿಯವರು ತಮ್ಮ ತವರು ಕ್ಷೇತ್ರಕ್ಕೆ ಮರಳುತ್ತಿದ್ದು, ಕಾರ್ಯಕರ್ತರು, ಮತದಾರರು, ಅಭಿಮಾನಿಗಳಿಗೆ ಕೆಲವೊಂದು ವಿಷಯದ ಬಗ್ಗೆ ಮನವಿ ಮಾಡಿಕೊಂಡಿದ್ದಾರೆ. ಅದರ ಸಾರಾಂಶ ಇಲ್ಲಿದೆ.
ಧಾರವಾಡ ಜಿಲ್ಲಾ ಪ್ರವೇಶದ ಕುರಿತು ಮಾನ್ಯ ನ್ಯಾಯಾಲಯದ ಆದೇಶ ಹಾಗೂ ಸಾರ್ವಜನಿಕರಿಗೆ ವಿನಂತಿ.
ಮಾನ್ಯ ನ್ಯಾಯಾಲಯವು ನನ್ನ ಮೇಲಿದ್ದ ಧಾರವಾಡ ಜಿಲ್ಲಾ ಪ್ರವೇಶದ ನಿರ್ಬಂಧದ ಷರತ್ತನ್ನು ತೆರವುಗೊಳಿಸಿ, ನನ್ನ ಶಾಸಕ ಸ್ಥಾನದ ಕರ್ತವ್ಯ ನಿರ್ವಹಣೆಗೆ ಹಾಗೂ ಜಿಲ್ಲೆಗೆ ಮರಳಲು ಅವಕಾಶ ಕಲ್ಪಿಸಿರುವ ತೀರ್ಪನ್ನು ನಾನು ನಮ್ರತೆಯಿಂದ ಸ್ವಾಗತಿಸುತ್ತೇನೆ.
ಸಂವಿಧಾನಾತ್ಮಕ ವ್ಯವಸ್ಥೆ ಮತ್ತು ನ್ಯಾಯಾಲಯದ ಮೇಲೆ ನನಗೆ ಸಂಪೂರ್ಣ ಗೌರವವಿದೆ.
ಕಳೆದ ಕೆಲವು ವರ್ಷಗಳಿಂದ ನನ್ನ ಕ್ಷೇತ್ರದ ಜನತೆ ಹಾಗೂ ಆತ್ಮೀಯ ಅಭಿಮಾನಿಗಳು ಪಟ್ಟಿರುವ ಶ್ರಮ, ತೋರಿದ ಪ್ರೀತಿ, ನಂಬಿಕೆ ಮತ್ತು ನಿರಂತರ ಬೆಂಬಲಕ್ಕೆ ನಾನು ಸದಾ ಚಿರಋಣಿಯಾಗಿದ್ದೇನೆ.
ನಿಮ್ಮೆಲ್ಲರ ಆಶೀರ್ವಾದದಿಂದಲೇ ಇಂದು ನನ್ನ ಶಾಸಕ ಸ್ಥಾನವು ಮರುಸ್ಥಾಪನೆಯಾಗಿದ್ದು, ಕ್ಷೇತ್ರದ ಜನತೆಯ ಸೇವೆ ಮಾಡಲು ಮತ್ತೊಮ್ಮೆ ಅವಕಾಶ ಸಿಕ್ಕಿದೆ.
ವಿಶೇಷ ವಿನಂತಿ:
ನ್ಯಾಯಾಲಯದ ಆದೇಶ ಹಾಗೂ ಕಾನೂನಿನ ನಿಬಂಧನೆಗಳನ್ವಯ, ನಾನು ಧಾರವಾಡ ಜಿಲ್ಲೆಗೆ ಮರಳುವ ಸಂದರ್ಭದಲ್ಲಿ ಯಾವುದೇ ರೀತಿಯ ವಿಜೃಂಭಣೆಯ ಸ್ವಾಗತ ಸಮಾರಂಭಗಳು, ಮೆರವಣಿಗೆಗಳು, ಬಹಿರಂಗ ಸಭೆಗಳು ಆಯೋಜಿಸದಂತೆ ನಾನು ಎಲ್ಲರಿಗೂ ಕಳಕಳಿಯಿಂದ ಮನವಿ ಮಾಡುತ್ತೇನೆ.
ಯಾವುದೇ ರೀತಿಯ ಸಾರ್ವಜನಿಕ ಸಭೆ-ಸಮಾರಂಭಗಳು ಅಥವಾ ಘೋಷಣೆಗಳಿಂದ ಸಾರ್ವಜನಿಕರಿಗೆ ಅಥವಾ ಸಂಚಾರಕ್ಕೆ ತೊಂದರೆಯಾಗಬಾರದು ಎಂಬುದು ನನ್ನ ಆಶಯ.
ದಯವಿಟ್ಟು ಯಾರೂ ಸಹ ಅಂತಹ ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಡಿ ಎಂದು ನನ್ನ ಅಭಿಮಾನಿಗಳು ಹಾಗೂ ಕಾರ್ಯಕರ್ತರಲ್ಲಿ ಕೈಮುಗಿದು ವಿನಂತಿಸಿಕೊಳ್ಳುತ್ತೇನೆ.
ನಮ್ಮ ಕ್ಷೇತ್ರದ ಅಭಿವೃದ್ಧಿಯೇ ನನ್ನ ಮೊದಲ ಹಾಗೂ ಮುಖ್ಯ ಆದ್ಯತೆಯಾಗಿದೆ. ಇನ್ನುಮುಂದೆ ಎಂದಿನಂತೆ ನಿಮ್ಮ ಸೇವೆ ಮಾಡಲು, ಕ್ಷೇತ್ರದ ಜನಸಾಮಾನ್ಯರ ಕುಂದುಕೊರತೆಗಳನ್ನು ಆಲಿಸಲು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಚುರುಕುಗೊಳಿಸಲು ನಾನು ಸದಾ ನಿಮ್ಮೊಂದಿಗೆ ಇರುತ್ತೇನೆ. ನಿಮ್ಮೆಲ್ಲರ ಹಾರೈಕೆ ಮತ್ತು ಸಹಕಾರ ಹೀಗೆಯೇ ಮುಂದುವರಿಯಲಿ ಎಂದು ಅಶಿಸುತ್ತೇನೆ.
ಇಂತಿ ನಿಮ್ಮ, ವಿನಯ್ ಕುಲಕರ್ಣಿ
ಸದಸ್ಯರು, ಕರ್ನಾಟಕ ವಿಧಾನಸಭೆ (ಧಾರವಾಡ ಕ್ಷೇತ್ರ)





