ಧಾರವಾಡ ತಾಲೂಕಿನ ಅಮ್ಮಿನಭಾವಿ ಗ್ರಾಮದಲ್ಲಿಂದು ಐತಿಹಾಸಿಕ ಕಾರ್ಯಕ್ರಮ ನಡೆಯಿತು. ಬದುಕಿಗೆ ಆಸರೆ ಇಲ್ಲದೆ ತವಕಿಸುತ್ತಿದ್ದ 444 ಕುಟುಂಬಗಳ ದಶಕಗಳ ಕನಸಿಗೆ ಕಾನೂನುಬದ್ಧ ಮುದ್ರೆ ಬಿದ್ದಿದೆ.
ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರ ನಿರಂತರ ಪ್ರಯತ್ನಕ್ಕೆ ಫಲ ಸಿಕ್ಕಿದ್ದು , ಧಾರವಾಡ ತಾಲ್ಲೂಕಿನ 13 ಉಪಕಂದಾಯ ಗ್ರಾಮಗಳ 1,623 ಕುಟುಂಬಗಳಿಗೆ ಹಕ್ಕಿನ ಭದ್ರತೆಯನ್ನು ಇಂದು ಒದಗಿಸಲಾಯಿತು.
ದಶಕಗಳಿಂದ ಸ್ವಂತ ಸೂರು ಇದ್ದರೂ, ಆ ಮನೆಯ ಮೇಲೆ ಕಾನೂನುಬದ್ಧ ಹಕ್ಕಿಲ್ಲದೆ ಆತಂಕದಲ್ಲಿ ಬದುಕುತ್ತಿದ್ದ ಅಮ್ಮಿನಭಾವಿ ನವಗ್ರಾಮದ ನಿವಾಸಿಗಳ ಪಾಲಿಗೆ ಇದೀಗ ಹೊಸ ಆಶಾಕಿರಣ ಮೂಡಿದೆ.
ಶಾಸಕ ವಿನಯ ಕುಲಕರ್ಣಿ ಅವರ ವಿಶೇಷ ಮುತುವರ್ಜಿಯಿಂದ 444 ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸುವ ಮಹತ್ವದ ಕಾರ್ಯಕ್ಕೆ ಇಂದು ಚಾಲನೆ ದೊರೆತಿದೆ.
ಕಳೆದ 40ರಿಂದ 50 ವರ್ಷಗಳಿಂದ ಗಾಯರಾಣ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡು ವಾಸಿಸುತ್ತಿದ್ದ ಅಮ್ಮಿನಭಾವಿ ನವಗ್ರಾಮದ ನಿವಾಸಿಗಳು ದಾಖಲೆಗಳ ಕೊರತೆಯಿಂದ ಹಲವು ಸರ್ಕಾರಿ ಸೌಲಭ್ಯಗಳು ಹಾಗೂ ಆಸ್ತಿಗೆ ಸಂಬಂಧಿಸಿದ ಕಾನೂನುಬದ್ಧ ಹಕ್ಕುಗಳಿಂದ ವಂಚಿತರಾಗಿದ್ದರು.
ಈ ದೀರ್ಘಕಾಲದ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಶಾಸಕ ವಿನಯ ಕುಲಕರ್ಣಿ ಅವರು ಸರ್ಕಾರದ ಮಟ್ಟದಲ್ಲಿ ನಿರಂತರವಾಗಿ ಪ್ರಯತ್ನ ನಡೆಸಿದ್ದರು.
ಬೆಳಗಾವಿಯಲ್ಲಿ ನಡೆದ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ಈ ವಿಚಾರವನ್ನು ಕಂದಾಯ ಸಚಿವರ ಗಮನಕ್ಕೆ ನೇರವಾಗಿ ತಂದು, 94-ಡಿ ನಿಯಮದಡಿ ಉಪಕಂದಾಯ ಗ್ರಾಮವನ್ನಾಗಿ ರಚಿಸುವ ಪ್ರಕ್ರಿಯೆಗೆ ವೇಗ ನೀಡುವಂತೆ ಒತ್ತಾಯಿಸಿದ್ದರು.
ಇದರ ಫಲವಾಗಿ ಅಮ್ಮಿನಭಾವಿ ಗ್ರಾಮದ ರಿ.ಸ.ನಂ. 1147/ಅ ಮತ್ತು 1148ರ ಒಟ್ಟು 45 ಎಕರೆ 09 ಗುಂಟೆ ಪ್ರದೇಶದಲ್ಲಿದ್ದ ದಾಖಲೆರಹಿತ ಜನವಸತಿ ಪ್ರದೇಶಕ್ಕೆ ‘ಅಮ್ಮಿನಭಾವಿ ನವಗ್ರಾಮ’ ಎಂದು ಅಧಿಕೃತ ಮಾನ್ಯತೆ ದೊರೆತಿದೆ. ಅಂತಿಮ ಅಧಿಸೂಚನೆ ಹೊರಬಂದಿದ್ದು, ಇದೀಗ ನಿವಾಸಿಗಳ ಹಲವು ದಶಕಗಳ ನಿರೀಕ್ಷೆ ಸಾಕಾರಗೊಂಡಿದೆ.
ರಾಜ್ಯದಲ್ಲೇ ಗಮನಾರ್ಹ ಮಾದರಿ
ಹಕ್ಕು ಪತ್ರ ವಿತರಣೆಯ ಪ್ರಕ್ರಿಯೆಯಲ್ಲಿ ಕಂದಾಯ ಇಲಾಖೆಯ ತಂತ್ರಾಂಶದಲ್ಲಿ ಫಲಾನುಭವಿಗಳ ಮಾಹಿತಿಯನ್ನು ದಾಖಲಿಸಿ, ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಿಸಿ, ಗ್ರಾಮ ಪಂಚಾಯಿತಿಯಲ್ಲಿ ಇ-ಸ್ವತ್ತು ಸೃಜಿಸಿ ಹಕ್ಕು ಪತ್ರ ವಿತರಿಸುವ ವ್ಯವಸ್ಥೆ ಜಾರಿಗೆ ತರಲಾಗಿದೆ.
ಈ ಪ್ರಕ್ರಿಯೆ ರಾಜ್ಯದಲ್ಲೇ ಗಮನಾರ್ಹ ಮಾದರಿಯಾಗಿದ್ದು, ಹಕ್ಕು ಪತ್ರ ಪಡೆದ ಕುಟುಂಬಗಳಿಗೆ ತಮ್ಮ ವಾಸಸ್ಥಳದ ಮೇಲೆ ಕಾನೂನುಬದ್ಧ ಭದ್ರತೆ ದೊರೆತಂತಾಗಿದೆ. ಅಮ್ಮಿನಭಾವಿ ನವಗ್ರಾಮದ 444 ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸಲಾಗುತ್ತಿದ್ದು, ಇದೇ ಮಾದರಿಯಲ್ಲಿ ಧಾರವಾಡ ತಾಲ್ಲೂಕಿನ 13 ಉಪಕಂದಾಯ ಗ್ರಾಮಗಳ ಒಟ್ಟು 1,623 ಕುಟುಂಬಗಳಿಗೆ ಹಕ್ಕು ಪತ್ರ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.ಹಾವೇರಿಯಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯಮಟ್ಟದ ಭೂ-ಗ್ಯಾರಂಟಿ ಸಮಾವೇಶದಲ್ಲಿಯೂ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲಾಗಿದೆ.
ರೈತರ ಬದುಕಿಗೂ ಬಲ: ಕೃಷಿ ಕ್ಷೇತ್ರಕ್ಕೆ ಸಮಗ್ರ ಬೆಂಬಲ
ಹಕ್ಕು ಪತ್ರ ವಿತರಣೆಯ ಜೊತೆಗೆ ಧಾರವಾಡ ತಾಲ್ಲೂಕಿನ ಕೃಷಿ ಕ್ಷೇತ್ರಕ್ಕೂ ಸರ್ಕಾರದ ವಿವಿಧ ಯೋಜನೆಗಳ ಮೂಲಕ ಹೆಚ್ಚಿನ ಬೆಂಬಲ ನೀಡಲಾಗುತ್ತಿದೆ.
ತಾಲ್ಲೂಕಿನಲ್ಲಿ ಸುಮಾರು 99,482 ಹೆಕ್ಟೇರ್ ಕೃಷಿ ಭೂಮಿ ಇದ್ದು, ಸುಮಾರು 65,364 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ನಡೆಯುತ್ತಿದೆ. ಇದರಲ್ಲಿ ಸುಮಾರು 36,120 ಹೆಕ್ಟೇರ್ ಮಳೆಯಾಶ್ರಿತ ಹಾಗೂ 22,450 ಹೆಕ್ಟೇರ್ ನೀರಾವರಿ ಪ್ರದೇಶವಾಗಿದೆ.
ಮುಂಗಾರು ಹಂಗಾಮಿನಲ್ಲಿ ಸುಮಾರು 59,805 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ನಡೆದಿದ್ದು, ಸೋಯಾಬೀನ್, ಉದ್ದು, ಹೆಸರು, ಮೆಕ್ಕೆಜೋಳ, ಭತ್ತ, ಶೇಂಗಾ, ಹತ್ತಿ ಮತ್ತು ಕಬ್ಬು ಪ್ರಮುಖ ಬೆಳೆಗಳಾಗಿವೆ.
ರೈತರಿಗೆ ಬಿತ್ತನೆ ಬೀಜದ ಕೊರತೆಯಾಗದಂತೆ ಮುಂಗಾರು ಹಂಗಾಮಿನಲ್ಲಿ ಸುಮಾರು 7,728 ಕ್ವಿಂಟಾಲ್ ಬಿತ್ತನೆ ಬೀಜಗಳನ್ನು ಸಹಾಯಧನದಡಿ ವಿತರಿಸಲಾಗಿದೆ.
24,506 ರೈತರಿಗೆ ಬೆಳೆ ವಿಮೆಯ ರಕ್ಷಣೆ
ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಯಡಿ ತಾಲ್ಲೂಕಿನ 24,506 ರೈತರು ನೋಂದಾಯಿಸಿಕೊಂಡಿದ್ದು, 19,310 ಹೆಕ್ಟೇರ್ ಕೃಷಿ ಪ್ರದೇಶ ವಿಮಾ ವ್ಯಾಪ್ತಿಗೆ ಒಳಪಟ್ಟಿದೆ.
ಇದರ ಮೂಲಕ ಪ್ರಕೃತಿ ವಿಕೋಪ ಸೇರಿದಂತೆ ವಿವಿಧ ಕಾರಣಗಳಿಂದ ಬೆಳೆ ಹಾನಿಗೊಳಗಾದ ಸಂದರ್ಭದಲ್ಲಿ ರೈತರಿಗೆ ಆರ್ಥಿಕ ಭದ್ರತೆ ಒದಗಿಸುವ ವ್ಯವಸ್ಥೆ ಮಾಡಲಾಗಿದೆ.
ರಸಗೊಬ್ಬರದ ಸಮರ್ಪಕ ಲಭ್ಯತೆ
ತಾಲ್ಲೂಕಿನ ರೈತರ ಅಗತ್ಯಕ್ಕೆ ಅನುಗುಣವಾಗಿ ರಸಗೊಬ್ಬರದ ಲಭ್ಯತೆಯನ್ನೂ ಖಚಿತಪಡಿಸಲಾಗುತ್ತಿದೆ. ಪ್ರಸ್ತುತ ಸುಮಾರು ಯೂರಿಯಾ – 4,748 ಟನ್
ಡಿಎಪಿ – 1,474 ಟನ್, ಎಂ.ಒ.ಪಿ. – 248 ಟನ್
ಕಾಂಪ್ಲೆಕ್ಸ್ ರಸಗೊಬ್ಬರ – 2,594 ಟನ್ ಲಭ್ಯವಿದ್ದು, ರೈತರ ಅಗತ್ಯಕ್ಕೆ ಅನುಗುಣವಾಗಿ ವಿತರಿಸಲಾಗುತ್ತಿದೆ.
ಈ ಕುರಿತು ಮಾತನಾಡಿದ ಶಾಸಕ ಶ್ರೀ ವಿನಯ ಕುಲಕರ್ಣಿ,
“40–50 ವರ್ಷಗಳಿಂದ ಸ್ವಂತ ಮನೆಯಲ್ಲೇ ವಾಸಿಸುತ್ತಿದ್ದರೂ, ಆ ಮನೆಯ ಮೇಲೆ ಕಾನೂನುಬದ್ಧ ಹಕ್ಕಿಲ್ಲದೆ ಬದುಕುತ್ತಿದ್ದ ಕುಟುಂಬಗಳ ನೋವನ್ನು ನಾನು ಹತ್ತಿರದಿಂದ ಅರಿತಿದ್ದೇನೆ. ಅಮ್ಮಿನಭಾವಿ ನವಗ್ರಾಮದ ಜನರ ದಶಕಗಳ ಸಮಸ್ಯೆಗೆ ಪರಿಹಾರ ದೊರೆತಿರುವುದು ಅತ್ಯಂತ ಸಂತಸದ ಸಂಗತಿ.
ಹಕ್ಕು ಪತ್ರವೆಂದರೆ ಕೇವಲ ಒಂದು ದಾಖಲೆ ಅಲ್ಲ; ಅದು ಬಡ ಕುಟುಂಬಗಳ ಸ್ವಾಭಿಮಾನ, ಭದ್ರತೆ ಮತ್ತು ಭವಿಷ್ಯಕ್ಕೆ ದೊರೆತಿರುವ ಕಾನೂನುಬದ್ಧ ಭರವಸೆ,” ಎಂದು ಹೇಳಿದರು.
“ಅಮ್ಮಿನಭಾವಿಯ 444 ಕುಟುಂಬಗಳಷ್ಟೇ ಅಲ್ಲದೆ, ಧಾರವಾಡ ತಾಲ್ಲೂಕಿನ 13 ಉಪಕಂದಾಯ ಗ್ರಾಮಗಳ 1,623 ಕುಟುಂಬಗಳಿಗೆ ಹಕ್ಕು ಪತ್ರ ದೊರಕುವಂತೆ ಮಾಡುವ ಪ್ರಯತ್ನ ನಡೆದಿದೆ. ಇದೇ ರೀತಿಯಲ್ಲಿ ರೈತರಿಗೆ ಬೀಜ, ರಸಗೊಬ್ಬರ, ಬೆಳೆ ವಿಮೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ತಲುಪಿಸುವ ಮೂಲಕ ಅವರ ಬದುಕನ್ನು ಮತ್ತಷ್ಟು ಸದೃಢಗೊಳಿಸುವುದು ನಮ್ಮ ಆದ್ಯತೆ,” ಎಂದು ವಿನಯ ಕುಲಕರ್ಣಿ ತಿಳಿಸಿದರು.
ದಶಕಗಳ ನಿರೀಕ್ಷೆಗೆ ತೆರೆ — ಹೊಸ ಬದುಕಿಗೆ ನಾಂದಿ
ಅಮ್ಮಿನಭಾವಿ ನವಗ್ರಾಮದ ನಿವಾಸಿಗಳಿಗೆ ಹಕ್ಕು ಪತ್ರ ದೊರೆತಿರುವುದು ಕೇವಲ ಆಡಳಿತಾತ್ಮಕ ಪ್ರಕ್ರಿಯೆಯಲ್ಲ; ದಶಕಗಳ ಅನಿಶ್ಚಿತತೆಗೆ ತೆರೆ ಎಳೆದು, ಸಾವಿರಾರು ಬಡ ಕುಟುಂಬಗಳಿಗೆ ಕಾನೂನುಬದ್ಧ ಭದ್ರತೆ ನೀಡಿದ ಮಹತ್ವದ ಹೆಜ್ಜೆಯಾಗಿದೆ.
ಸ್ವಂತ ಮನೆಯ ಕನಸು ಕಂಡಿದ್ದ ಕುಟುಂಬಗಳಿಗೆ ಇದೀಗ “ನಮ್ಮ ಮನೆ — ನಮ್ಮ ಹಕ್ಕು” ಎಂಬ ಆತ್ಮವಿಶ್ವಾಸ ಮೂಡಿದ್ದು, ಹಕ್ಕು ಪತ್ರದ ಮೂಲಕ ಅವರ ಭವಿಷ್ಯಕ್ಕೆ ಹೊಸ ಭದ್ರತೆಯ ಅಧ್ಯಾಯ ಆರಂಭವಾಗಿದೆ.
ಈ ಸಂದರ್ಭದಲ್ಲಿ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧ್ಯಕ್ಷರಾದ ಶಿವಲೀಲಾ ಕುಲಕರ್ಣಿ, ವೈಶಾಲಿ ಕುಲಕರ್ಣಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅರವಿಂದ ಏಗನಗೌಡರ,ತಹಶೀಲ್ದಾರ ಸಚ್ಚಿದಾನಂದ, ತಾಲ್ಲೂಕು ಪಂಚಾಯತ್ ಆಡಳಿತಾಧಿಕಾರಿ ಗಂಗಾಧರ ಕಂದಕೂರ್,ಕೃಷಿ ಅಧಿಕಾರಿ ರಾಜಶೇಖರ ಅನಗೌಡರ್,ಮುಖಂಡರಾದ ಈಶ್ವರ್ ಶಿವಳ್ಳಿ, ಪಾರಿಸ್ ಪತ್ರಾವಳಿ,ಸದಾನಂದ ಮುಂದಿನಮನಿ,ರಾಜೇಶ ಚವ್ವಾನ,ಸೇರಿದಂತೆ ಸಾವಿರಾರು ಜನರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.





