ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೇಸ್ಸಿಗೆ ಸೋಲಾಗಿದೆ. ಆದರೆ ಸೋತಿದ್ದು ಮೋಹನ ಲಿಂಬಿಕಾಯಿಯವರಲ್ಲ, ಸೋತಿದ್ದು ಪಂಚಮಸಾಲಿ ಪೋಲಿಟಿಕ್ಸ್ ಎಂದು ಮಾತನಾಡಿಕೊಳ್ಳಲಾಗುತ್ತಿದೆ.
ಅಷ್ಟಕ್ಕೂ ಕಾಂಗ್ರೇಸ್ ಅಭ್ಯರ್ಥಿಗೆ ಖೆಡ್ಡಾ ತೋಡಿದವರು ಅದೇ ಕಾಂಗ್ರೇಸ್ಸಿಗರು ಎಂಬ ಸತ್ಯ ಅನಾವರಣಗೊಳ್ಳುತ್ತಿದೆ.
ಅದರೊಟ್ಟಿಗೆ ಮೋಹನ ಲಿಂಬಿಕಾಯಿಯವರ ಸೋಲಿಗೆ ನಾನಾ ಕಾರಣಗಳು ಕೇಳಿ ಬರುತ್ತಿವೆ.
ಪಕ್ಷದಲ್ಲಿ ಹೊಸ ನಾಯಕತ್ವ ಸೃಷ್ಟಿಯಾಗುತ್ತದೆ ಅನ್ನೋ ಭಯದಿಂದಲೋ ಅಥವಾ ಪಂಚಮಸಾಲಿ ಸಮುದಾಯ ಗಟ್ಟಿಯಾಗುತ್ತದೆ ಅನ್ನೋ ಕಾರಣಕ್ಕೋ ಸೋಲಾಗಿರುವದು ಎದ್ದು ಕಾಣುತ್ತಿದೆ.
ಅಷ್ಟಕ್ಕೂ ಖೆಡ್ಡಾ ತೋಡಿದವರು ಕಾಂಗ್ರೇಸ್ಸಿಗರೇ ಅನ್ನೋದು ಇದೀಗ ತೀವ್ರ ಕುತೂಹಲ ಮೂಡಿಸಿದೆ.
ಸತತ ಮೂರನೇ ಬಾರಿಗೆ ಬಿಜೆಪಿ ಅಭ್ಯರ್ಥಿ, ಎಸ್.ವಿ. ಸಂಕನೂರು ಗೆಲುವು ಸಾಧಿಸಿದ್ದಾರೆ. 9,323 ಮತಗಳ ಅಂತರದಲ್ಲಿ ಜಯಭೇರಿ ಭಾರಿಸಿದ್ದಾರೆ.
ಬಿಜೆಪಿ ತೆಕ್ಕೆಯಲ್ಲಿದ್ದ ಪಶ್ಚಿಮ ಪದವೀಧರ ಕ್ಷೇತ್ರವನ್ನು, ಮತ್ತೆ ಕಾಂಗ್ರೇಸ್ಸಿನ ಗೂಡಿಗೆ ತರುವ ಪ್ರಯತ್ನವಂತೂ ವಿಫಲವಾಗಿದೆ.
ಉತ್ತರ ಕನ್ನಡ, ಹಾವೇರಿ, ಗದಗ ಮತ್ತು ಧಾರವಾಡ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ಈ ಕ್ಷೇತ್ರದಲ್ಲಿ ಪದವೀಧರ ಮತದಾರರು ಮತ್ತೊಮ್ಮೆ ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡಿದ್ದಾರೆ.
ಈ ಫಲಿತಾಂಶ ನಾಲ್ಕು ಜಿಲ್ಲೆಗಳ ಕಾಂಗ್ರೆಸ್ ನಾಯಕರ ರಾಜಕೀಯ ಲೆಕ್ಕಾಚಾರವನ್ನು ಉಲ್ಟಾ ಮಾಡಿದೆ.
ಅತಿಯಾದ ಉತ್ಸಾಹದಲ್ಲಿ ಕಾಂಗ್ರೇಸ್ ನಾಯಕರು, ಮೈಮರೆತಂತೆ ಕಂಡು ಬಂದರು, ಒಗ್ಗಟ್ಟಿನ ಪ್ರದರ್ಶನ ಆಗದಿರುವದು ಸೋಲಿಗೆ ಕಾರಣ ಎಂದು ಅಂದಾಜಿಸಲಾಗುತ್ತಿದೆ.
ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರು 33,711 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಮೋಹನ ಲಿಂಬಿಕಾಯಿ 24,388 ಮತಗಳನ್ನು ಗಳಿಸಿದ್ದಾರೆ.
ವಿದ್ಯಾವಂತ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಷೇತ್ರದಲ್ಲಿ 10,245 ಮತಗಳು ಅಸಿಂಧುಗೊಂಡಿರುವುದು ಮತ್ತೊಂದು ಗಮನಾರ್ಹ ಅಂಶವಾಗಿದೆ.
ಮತ ಕೇಳಲು ಬಂದವರಿಗೆ ಮತದಾರರ ತೀರ್ಪು!
ಚುನಾವಣೆಯ ಸಂದರ್ಭದಲ್ಲಿ ಮತದಾರರನ್ನು ಸೆಳೆಯಲು ವಿವಿಧ ರಾಜಕೀಯ ತಂತ್ರಗಳನ್ನು ಅನುಸರಿಸಲಾಗಿತ್ತು. ಆದರೆ ಫಲಿತಾಂಶ ಮಾತ್ರ ಕಾಂಗ್ರೆಸ್ಗೆ ನಿರೀಕ್ಷಿತ ಮಟ್ಟದ ಯಶಸ್ಸು ತಂದುಕೊಟ್ಟಿಲ್ಲ.
ಮತದಾರರ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳುವಲ್ಲಿ, ವಿದ್ಯಾವಂತರ ಮೇಲೆ ಪ್ರಭಾವ ಬೀರುವಲ್ಲಿ ಕಾಂಗ್ರೆಸ್ ನಾಯಕರು ಎಡವಿದರೇ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಕೈ ಹಿಡಿಯದ ಪಂಚಮಸಾಲಿ ರಾಜಕೀಯ?
ಮತದಾನಕ್ಕೆ ಕೇವಲ ನಾಲ್ಕು ದಿನಗಳು ಬಾಕಿ ಇರುವಾಗ ಪಂಚಮಸಾಲಿ ಸಮುದಾಯದ ವಿಚಾರ ಮುನ್ನೆಲೆಗೆ ಬಂದಿತ್ತು ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.
ಈ ತಂತ್ರವು ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ನೀಡಲಿಲ್ಲ ಎಂಬ ವಿಶ್ಲೇಷಣೆಗಳೂ ವ್ಯಕ್ತವಾಗುತ್ತಿವೆ.
ವಿಶೇಷವಾಗಿ ಧಾರವಾಡ ಜಿಲ್ಲೆಯಲ್ಲಿ ಪಂಚಮಸಾಲಿ ಸಮುದಾಯದ ಮತಗಳ ಜೊತೆ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಮತಗಳು ನಿರ್ಣಾಯಕವಾಗಬಹುದು ಎಂಬ ಲೆಕ್ಕಾಚಾರಗಳಿದ್ದವು. ಅದು ಈಗ ಹುಸಿಯಾಗಿದೆ.
ಈ ಚುನಾವಣಾ ಫಲಿತಾಂಶವು 2028ರ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ತಮ್ಮ ಕಾರ್ಯತಂತ್ರವನ್ನು ಮರುಪರಿಶೀಲಿಸಬೇಕಾದ ಅಗತ್ಯವನ್ನು ನೆನಪಿಸಿದೆ.
ಸ್ಥಳೀಯ ಸಮಸ್ಯೆಗಳ ಬದಲು ರಾಷ್ಟ್ರೀಯ ವಿಚಾರಗಳ ಚರ್ಚೆ?
ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಸ್ಥಳೀಯ ಸಮಸ್ಯೆಗಳು, ಪದವೀಧರರ ಉದ್ಯೋಗಾವಕಾಶಗಳು, ನಿರುದ್ಯೋಗ, ಶಿಕ್ಷಣ ಮತ್ತು ಆಡಳಿತಾತ್ಮಕ ಸಮಸ್ಯೆಗಳ ಕುರಿತು ಹೆಚ್ಚಿನ ಚರ್ಚೆ ನಡೆಯಬೇಕಿತ್ತು ಎಂಬ ಅಭಿಪ್ರಾಯಗಳೂ ಕೇಳಿಬರುತ್ತಿವೆ.
ಆದರೆ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅದಾನಿ, ಅಂಬಾನಿ ಮತ್ತು ಡಾಲರ್ ಏರುಪೇರು ನಂತಹ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ವಿಚಾರಗಳ ಚರ್ಚೆಗೆ ಹೆಚ್ಚಿನ ಒತ್ತು ನೀಡಿದ್ದು, ಸ್ಥಳೀಯ ಸಮಸ್ಯೆಗಳಿಗೆ ಸೂಕ್ತ ಆದ್ಯತೆ ಸಿಗಲಿಲ್ಲ ಎಂಬ ಟೀಕೆಗಳು ವ್ಯಕ್ತವಾಗಿವೆ.
ಒಟ್ಟಿನಲ್ಲಿ, ಪಶ್ಚಿಮ ಪದವೀಧರ ಕ್ಷೇತ್ರದ ಫಲಿತಾಂಶವು ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳಿಗೆ ಹಲವು ರಾಜಕೀಯ ಪಾಠಗಳನ್ನು ನೀಡಿದೆ.
ಮತದಾರರ ನಿರೀಕ್ಷೆಗಳು, ಸ್ಥಳೀಯ ಸಮಸ್ಯೆಗಳು ಮತ್ತು ಚುನಾವಣಾ ಕಾರ್ಯತಂತ್ರಗಳ ಕುರಿತು ಆತ್ಮಾವಲೋಕನ ನಡೆಸಬೇಕಾದ ಅನಿವಾರ್ಯತೆಯನ್ನು ಈ ಫಲಿತಾಂಶ ಮುನ್ನೆಲೆಗೆ ತಂದಿದೆ.
ಏನೇ ಆಗಲಿ ಪಶ್ಚಿಮ ಪದವೀಧರ ಕ್ಷೇತ್ರದ ವ್ಯಾಪ್ತಿಯ, ನಾಲ್ಕು ಜಿಲ್ಲೆಗಳಲ್ಲಿ ಕಾಂಗ್ರೇಸ್ ಪಕ್ಷದ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿದ್ದರು ಸಹ, ಕಾಂಗ್ರೇಸ್ ಅಭ್ಯರ್ಥಿಗೆ ಸೋಲಾಗಿರುವದು ಸೋಜಿಗ ಮೂಡಿಸಿದೆ.
ಜಿಲ್ಲೆಯ ರಾಜಕೀಯ ಇತಿಹಾಸವನ್ನು ಅವಲೋಕಿಸಿದಾಗ ಕಾಂಗ್ರೇಸ್ ಅಂಗಳದಲ್ಲಿ ” ದುಷ್ಮನ್ ಕಹಾ ಹೈ ” ಅಂದರೆ ” ದುಷ್ಮನ್ ಬಗಲ್ ಮೇ ಹೈ ” ಎಂಬಂತಹ ಮಾತುಗಳು ಹೆಚ್ಚು ಪುಷ್ಟಿ ನೀಡುತ್ತವೆ.




