ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರ ಮಹತ್ವಾಕಾಂಕ್ಷಿ ಕಾರ್ಯಕ್ರಮವಾಗಿರುವ ಭಾರತ ಜೋಡೋ ಯುವ ಮಿಷನ್ ಧಾರವಾಡ ಜಿಲ್ಲೆಯಲ್ಲಿ ಅಡ್ಡದಾರಿ ಹಿಡಿದಿದೆ.
ಭಾರತ ಜೋಡೋ ಯುವ ಮಿಷನ್ ಗೆ ವಿದ್ಯಾರ್ಥಿಗಳ ಸದಸ್ಯತ್ವ ನೊಂದಣಿ ಮಾಡಿಸುವಂತೆ ಅಧಿಕಾರಿಗಳು ಕಾಲೇಜು ಆಡಳಿತ ಮಂಡಳಿ ಮೇಲೆ ಒತ್ತಡ ಹೇರುತ್ತಿದ್ದಾರೆ.
ಇನ್ನು ಧಾರವಾಡ ನಗರದಲ್ಲಿನ ಹಾಸ್ಟೆಲ್ ಗಳಲ್ಲಿಯೂ ಅದೇ ಸ್ಥಿತಿ ತಲೆದೋರಿದೆ. ಹಾಸ್ಟೆಲ್ ನಲ್ಲಿನ ವಿದ್ಯಾರ್ಥಿಗಳು ಭಾರತ ಜೋಡೋ ಯುವ ಮಿಷನ್ ಗೆ ಸದಸ್ಯರಾಗುವದನ್ನು ಕಡ್ಡಾಯಗೊಳಿಸಲಾಗಿದೆ.
ಆಗಸ್ಟ್ ತಿಂಗಳ ಒಳಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಭಾರತ ಜೋಡೋ ಯುವ ಸಂಘಗಳು ರಚನೆಯಾಗಬೇಕು ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಖಡಕ್ ಸೂಚನೆ ನೀಡಿದ ಬಳಿಕ, ಜಿಲ್ಲಾ ಮಟ್ಟದ ಅಧಿಕಾರಿಗಳು ಕಾಟಾಚಾರಕ್ಕೆ ಸದಸ್ಯತ್ವ ನೊಂದಣಿ ಮಾಡಿಸುತ್ತಿದ್ದಾರೆ.
ಏನಿದು ಭಾರತ ಜೋಡೋ ಯುವ ಮಿಷನ್
ಕರ್ನಾಟಕ ಸರ್ಕಾರದ “ಭಾರತ್ ಜೋಡೋ ಯುವ ಸಂಘ” ಯೋಜನೆ ಮುಖ್ಯಮಂತ್ರಿಯವರ ಕಾರ್ಯಕ್ರಮವಾಗಿದೆ.
ರಾಜ್ಯಾದ್ಯಂತ 10,000 ಭಾರತ್ ಜೋಡೋ ಯುವ ಸಂಘಗಳು ಸ್ಥಾಪಿಸುವ ಗುರಿ ಹೊಂದಲಾಗಿದೆ. ಗ್ರಾಮ ಪಂಚಾಯಿತಿ ಮತ್ತು ನಗರ ವಾರ್ಡ್ ಮಟ್ಟದಲ್ಲಿ ಸಂಘಗಳ ರಚನೆ ಮಾಡಿ, ಯುವಕರಲ್ಲಿ ಕ್ರೀಡೆ, ಸಂಸ್ಕೃತಿ, ಸಾಮಾಜಿಕ ಸಾಮರಸ್ಯ, ನಾಯಕತ್ವ ಮತ್ತು ಕೌಶಲ್ಯಾಭಿವೃದ್ಧಿ ಉತ್ತೇಜಿಸುವುದು ಇದರ ಉದ್ದೇಶವಾಗಿದೆ.
ರಚನೆಯಾಗುವ ಪ್ರತಿ ಸಂಘಕ್ಕೆ ವಾರ್ಷಿಕ ₹10 ಲಕ್ಷ ಅನುದಾನ ನೀಡಲಾಗುತ್ತದೆ. ರಾಜ್ಯದಲ್ಲಿ 10,000 ಸಂಘಗಳಿಗೆ ಒಟ್ಟು ಸುಮಾರು ₹1,000 ಕೋಟಿ ಮೀಸಲಿಡಲಾಗಿದೆ.
16 ರಿಂದ 35 ವರ್ಷ ವಯಸ್ಸಿನ ಯುವಕರು ಈ ಭಾರತ ಜೋಡೋ ಯುವ ಸಂಘದಲ್ಲಿ ಸದಸ್ಯತ್ವರಾಗಬಹುದು. ಸದಸ್ಯರಾಗುವ ಯುವಕರಿಗೆ ತಲಾ 10 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ.
ಧಾರವಾಡ ಜಿಲ್ಲೆಯಲ್ಲಿನ ಕಾಲೇಜು ಮತ್ತು ಹಾಸ್ಟೆಲ್ ನಲ್ಲಿ ಇರುವ ವಿದ್ಯಾರ್ಥಿಗಳಿಗೆ ಭಾರತ ಜೋಡೋ ಯುವ ಸಂಘದ ಸದಸ್ಯತ್ವ ಪಡೆದುಕೊಳ್ಳುವಂತೆ ಹೇಳುತ್ತಿರುವದು ಇದಕ್ಕೆ ಪಾಲಕರು ವಿರೋಧ ವ್ಯಕ್ತಪಡಿಸಿದ್ದಾರೆ.





