ನವಲಗುಂದ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಡಾ. ರಾಜಶೇಖರ ಶಿರಿಯಣ್ಣನವರ ಇಂದು ನಿಧನರಾದರು.
ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ಧಾಖಲು ಮಾಡಲಾಗಿತ್ತು.
ಆರೋಗ್ಯ ಸ್ವಲ್ಪ ಚೇತರಿಸಿಕೊಂಡ ಬಳಿಕ ಅವರನ್ನು ನಾಯಕನಹೂಲಿಕಟ್ಟಿಯಲ್ಲಿರುವ ತೋಟದ ಮನೆಗೆ ಕರೆತರಲಾಗಿತ್ತು.
ಇಂದು ಬೆಳಿಗ್ಗೆಯಿಂದ ಅವರ ಆರೋಗ್ಯದಲ್ಲಿ ಏಕಾಏಕಿ ಏರುಪೇರು ಕಾಣಿಸಿಕೊಂಡಿತ್ತು. ಮಧ್ಯಾಹ್ನ 1-30 ಕ್ಕೆ ಅವರು 83 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು.
ಡಾ. ಆರ್ ಬಿ ಶಿರಿಯಣ್ಣನವರು (ರಾಜಶೇಖರ್ ಬಸಪ್ಪ ಶಿರಿಯಣ್ಣನವರ) 2004 ರಲ್ಲಿ ಕರ್ನಾಟಕ ವಿಧಾನಸಭೆಗೆ ಶಾಸಕರಾಗಿ ಆಯ್ಕೆಯಾಗಿದ್ದರು.
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಅಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಅವರು, ನವಲಗುಂದ ವಿಧಾನಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ (BJP) ಅಭ್ಯರ್ಥಿಯಾಗಿ ಸ್ಪರ್ಧಿಸಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ.ಎನ್. ಗಡ್ಡಿ ಅವರನ್ನು ಸೋಲಿಸುವ ಮೂಲಕ ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು.
2004 ರಿಂದ 2008 ರವರೆಗೆ ಶಾಸಕರಾಗಿ ಸೇವೆ ಸಲ್ಲಿಸಿದ ಅವರು ನವಲಗುಂದ ಕ್ಷೇತ್ರಕ್ಕೆ ಮರೆಯಲಾರದ ಕೊಡುಗೆ ನೀಡಿದ್ದಾರೆ.
ನವಲಗುಂದದಲ್ಲಿ ನಾಳೆ ಬೆಳಿಗ್ಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ
ಇಂದು ನಿಧನರಾದ ಡಾ. ಆರ್ ಬಿ ಶಿರಿಯಣ್ಣನವರ ಅವರ ಪಾರ್ಥಿವ ಶರೀರವನ್ನು ನಾಳೆ ಬೆಳಿಗ್ಗೆ ನವಲಗುಂದಕ್ಕೆ ತರಲಾಗುತ್ತಿದೆ.
ನಾಳೆ ಬೆಳಿಗ್ಗೆ 7 ಘಂಟೆಯಿಂದ 9 ಘಂಟೆಯವರೆಗೆ ವೀರಶೈವ ಲಿಂಗಾಯತ ಭವನದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತಿದೆ.
ನಂತರ ಪಾರ್ಥಿವ ಶರೀರವನ್ನು ಧಾರವಾಡದ ನಾಯಕನಹೂಲಿಕಟ್ಟಿಗೆ ತಂದು, ಮಧ್ಯಾಹ್ನ 2 ಘಂಟೆಗೆ, ತೋಟದ ಮನೆಯಲ್ಲಿ ಅಂತಿಮಸಂಸ್ಕಾರ ನಡೆಯಲಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.





