ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲೂಕುಗಳನ್ನು ತಕ್ಷಣವೇ ಬರಪೀಡಿತ ಪ್ರದೇಶಗಳೆಂದು ಘೋಷಿಸಬೇಕು. ಸೆಪ್ಟೆಂಬರ್ 8ರೊಳಗೆ ಸರ್ಕಾರ ಈ ಕುರಿತು ಸ್ಪಷ್ಟ ನಿರ್ಧಾರ ಕೈಗೊಳ್ಳದಿದ್ದರೆ ರೈತ ಸಮುದಾಯವನ್ನು ಒಗ್ಗೂಡಿಸಿಕೊಂಡು ಸರ್ಕಾರದ ವಿರುದ್ಧ ಬೃಹತ್ ಹಾಗೂ ಉಗ್ರ ಹೋರಾಟಕ್ಕೆ ಮುಂದಾಗುವುದಾಗಿ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಎಚ್ಚರಿಕೆ ನೀಡಿದ್ದಾರೆ.
ಸತತ ಮಳೆ ಕೊರತೆ ಹಾಗೂ ಪ್ರತಿಕೂಲ ಹವಾಮಾನದಿಂದಾಗಿ ರೈತರು ಅಪಾರ ನಷ್ಟ ಅನುಭವಿಸುತ್ತಿದ್ದಾರೆ. ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಬೆಳೆದ ಹೆಸರು, ಉದ್ದು, ಹತ್ತಿ, ಗೋವಿನಜೋಳ, ಸೋಯಾಬಿನ್, ಕಬ್ಬು, ಮೆಣಸಿನಕಾಯಿ, ಈರುಳ್ಳಿ, ಶೇಂಗಾ ಹಾಗೂ ಪೇರಲ ಸೇರಿದಂತೆ ಹಲವು ಬೆಳೆಗಳು ಸಂಪೂರ್ಣ ಹಾನಿಗೀಡಾಗಿವೆ.
ರೈತರು ಕಣ್ಣೀರಿನಲ್ಲಿ ಕೈತೊಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದರೂ ರಾಜ್ಯ ಸರ್ಕಾರ ಮಾತ್ರ ರೈತರ ಸಂಕಷ್ಟಕ್ಕೆ ಸ್ಪಂದಿಸದೆ ಕಣ್ಣು ಮುಚ್ಚಿ ಕುಳಿತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರು ಸಾಲ ಮಾಡಿ, ಬಡ್ಡಿಗೆ ಹಣ ತಂದು ಕೃಷಿ ಮಾಡಿದ್ದಾರೆ. ಬೀಜ, ಗೊಬ್ಬರ, ಔಷಧಿ ಸೇರಿದಂತೆ ಕೃಷಿ ವೆಚ್ಚಕ್ಕಾಗಿ ಸಾವಿರಾರು ರೂಪಾಯಿ ಹೂಡಿಕೆ ಮಾಡಿದ್ದಾರೆ. ಆದರೆ ಬೆಳೆ ಕೈಗೆ ಬರುವ ಮುನ್ನವೇ ನಾಶವಾಗಿದ್ದು, ರೈತ ಕುಟುಂಬಗಳು ಆರ್ಥಿಕ ಸಂಕಷ್ಟದ ಅಂಚಿಗೆ ತಲುಪಿವೆ. ಇಂತಹ ಗಂಭೀರ ಪರಿಸ್ಥಿತಿಯಲ್ಲೂ ಸರ್ಕಾರ ರೈತರ ನೆರವಿಗೆ ಧಾವಿಸದಿರುವುದು ಅತ್ಯಂತ ಖಂಡನೀಯ ಎಂದು ಮುನೇನಕೊಪ್ಪ ಕಿಡಿಕಾರಿದ್ದಾರೆ.
ಪ್ರತಿ ಎಕರೆಗೆ ಕನಿಷ್ಠ ₹50 ಸಾವಿರ ಪರಿಹಾರ ನೀಡಬೇಕು. ಅಲ್ಲದೆ, ತಕ್ಷಣವೇ ಬರಗಾಲ ಘೋಷಿಸಿ, ಬರ ಪರಿಹಾರ ಕಾಮಗಾರಿಗಳನ್ನು ಆರಂಭಿಸುವ ಮೂಲಕ ಗ್ರಾಮೀಣ ಭಾಗದ ದುಡಿಯುವ ಕೈಗಳಿಗೆ ಉದ್ಯೋಗ ಕಲ್ಪಿಸಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ನವಲಗುಂದ, ಅಣ್ಣಿಗೇರಿ ಮತ್ತು ಹುಬ್ಬಳ್ಳಿ ತಾಲೂಕುಗಳಲ್ಲಿ ರೈತರು ಎದುರಿಸುತ್ತಿರುವ ಸಂಕಷ್ಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಕೇವಲ ಅಧಿಕಾರಿಗಳ ವರದಿ ಮತ್ತು ಕಚೇರಿ ದಾಖಲೆಗಳನ್ನು ನಂಬಿಕೊಂಡು ಕುಳಿತುಕೊಳ್ಳದೆ, ಸರ್ಕಾರದ ಪ್ರತಿನಿಧಿಗಳು ನೇರವಾಗಿ ರೈತರ ಹೊಲಗಳಿಗೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಅತಿವೃಷ್ಟಿ ಅಥವಾ ಅನಾವೃಷ್ಟಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ ತಕ್ಷಣವೇ ಸ್ಪಂದಿಸಿ ಅಗತ್ಯ ಪರಿಹಾರ ಹಾಗೂ ನೆರವು ನೀಡಲಾಗುತ್ತಿತ್ತು.
ಆದರೆ ಕಳೆದ ಮೂರುವರೆ ವರ್ಷಗಳಿಂದ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ರೈತರ ಸಂಕಷ್ಟಕ್ಕೆ ಸಮರ್ಪಕವಾಗಿ ಸ್ಪಂದಿಸಿಲ್ಲ. ರೈತರ ಖಾತೆಗೆ ಒಂದೇ ಒಂದು ರೂಪಾಯಿ ಪರಿಹಾರ ತಲುಪಿಲ್ಲ ಎಂಬ ಆರೋಪ ಮಾಡಿರುವ ಅವರು, ಗ್ಯಾರಂಟಿಗಳ ಹೆಸರಿನಲ್ಲಿ ಜನರ ಗಮನ ಬೇರೆಡೆ ಸೆಳೆಯುವ ಸರ್ಕಾರ, ಅನ್ನದಾತರ ಬದುಕಿನ ಪ್ರಶ್ನೆ ಬಂದಾಗ ಮೌನಕ್ಕೆ ಶರಣಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
“ರಾಜ್ಯದಲ್ಲಿ ಸರ್ಕಾರ ಜೀವಂತವಿದೆಯೇ ಎಂಬ ಅನುಮಾನ ಜನರಲ್ಲಿ ಮೂಡುತ್ತಿದೆ. ರೈತರು ಬೆಳೆ ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದರೂ ಸರ್ಕಾರಕ್ಕೆ ಅವರ ನೋವು ಕಾಣುತ್ತಿಲ್ಲ. ರೈತರ ಬದುಕಿನೊಂದಿಗೆ ಚೆಲ್ಲಾಟವಾಡುವುದನ್ನು ಸರ್ಕಾರ ತಕ್ಷಣ ನಿಲ್ಲಿಸಬೇಕು,” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೆಪ್ಟೆಂಬರ್ 8 ಸರ್ಕಾರಕ್ಕೆ ಕೊನೆಯ ಗಡುವು
ಅಷ್ಟರೊಳಗೆ ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲೂಕುಗಳನ್ನು ಬರಗಾಲ ಪ್ರದೇಶವೆಂದು ಘೋಷಿಸಿ, ರೈತರಿಗೆ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ನೀಡುವ ಕುರಿತು ಸ್ಪಷ್ಟ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ರೈತಕುಲವನ್ನು ಸಂಘಟಿಸಿ ಸರ್ಕಾರಕ್ಕೆ ತಕ್ಕ ಉತ್ತರ ನೀಡುವ ರೀತಿಯ ಬೃಹತ್ ಹಾಗೂ ತೀವ್ರ ಹೋರಾಟ ಆರಂಭಿಸಲಾಗುವುದು ಎಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.





