ಚೋಟಾ ಮುಂಬಯಿ ಖ್ಯಾತಿಯ ಹುಬ್ಬಳ್ಳಿ ಧಾರವಾಡಕ್ಕೆ ನೂತನ ಪೊಲೀಸ್ ಕಮಿಷನರ್ ನೇಮಕವಾಗಿದೆ.
ಭೂಷಣ ಗುಲಾಬರಾವ ಬೊರಸೆಯವರನ್ನು ಕಮಿಷನರ್ ಆಗಿ ನೇಮಕ ಮಾಡಲಾಗಿದೆ.
ಬೊರಸೆಯವರು ಅವಳಿ ನಗರದ ಪೊಲೀಸ್ ಕಮಿಷನರ್ ಆಗಿ ಇನ್ನು ಅಧಿಕಾರ ಸ್ವೀಕರಿಸಿಲ್ಲ, ಈಗಲೇ ಅವರ ಬಗ್ಗೆ ಪೊಲೀಸ್ ಇಲಾಖೆಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಅವರ ಕಾರ್ಯವೈಖರಿ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ.
ಬೊರಸೆ ಅವರ ಬಗ್ಗೆ ಒಂದಿಷ್ಟು ಸಂಗ್ರಹಿತ ಮಾಹಿತಿ ಇಲ್ಲಿದೆ.
ಮೊದಲಿಗೆ ಅವರನ್ನು ಪರಿಚಯಿಸುವದಾದರೆ, ಇವರು 2009 ನೇ IPS ಬ್ಯಾಚ್ ಅಧಿಕಾರಿ. ಪಕ್ಕದ ಮಹಾರಾಷ್ಟ್ರದವರಾದ ಬೊರಸೆ ಅವರು ಕರ್ನಾಟಕ ಕೇಡರ್ ಅಧಿಕಾರಿಯಾಗಿದ್ದಾರೆ.
ಐ ಪಿ ಎಸ್ ಅಧಿಕಾರಿ ಆದ ಬಳಿಕ, ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ವಿವಿಧ ಪ್ರಮುಖ ಹುದ್ದೆಗಳಲ್ಲಿ ಇವರು ಸೇವೆ ಸಲ್ಲಿಸಿದ್ದಾರೆ.
ಭೂಷಣ ಗುಲಾಬರಾವ ಬೊರಸೆ ಅವರು: ಪುಣೆ ವಿಶ್ವವಿದ್ಯಾಲಯದಿಂದ B.E. (Chemical Engineering) ವಿಷಯದಲ್ಲಿ ಪದವಿ ಪಡೆದಿದ್ದಾರೆ.
ಎನ್ಐಟಿ ಜಂಶೆಡ್ಪುರ್ ದಿಂದ M.Tech ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅಲ್ಲದೇ ಪೊಲೀಸ್ ನಿರ್ವಹಣೆ (Masters Degree in Police Management) ವಿಷಯದಲ್ಲಿಯೂ ಕೂಡ ಪದವಿ ಪಡೆದಿದ್ದಾರೆ.
ಇವರ ಸೇವಾ ಅನುಭವದ ಬಗ್ಗೆ ಹೇಳುವದಾದರೆ, ಭಾರತೀಯ ಪೊಲೀಸ್ ಇಲಾಖೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ತಂದು ಕೊಟ್ಟಿದ್ದಾರೆ.
ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿರುವ ಬೊರಸೆ, ಕಲಬುರಗಿಯಲ್ಲಿ ASP, ಮಂಡ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ SP ಆಗಿ ಕೆಲಸ ಮಾಡಿದ್ದಾರೆ.
CID ಯಲ್ಲಿ Cyber ಕ್ರೈಂ SP ಯಾಗಿ ದೊಡ್ಡ ಹೆಸರು ಮಾಡಿದ್ದಾರೆ. ಬೆಂಗಳೂರು ನಗರದ ಡಿಸಿಪಿ ಯಾಗಿಯೂ ಕೆಲಸ ಮಾಡಿದ್ದಾರೆ.
ಭಾರತೀಯ ಪೊಲೀಸ್ ಸೇವೆಯಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಇವರಿಗೆ 2015 ರಲ್ಲಿ ರಾಷ್ಟ್ರೀಯ ಇ-ಆಡಳಿತ ಪ್ರಶಸ್ತಿ ಸಿಕ್ಕಿದೆ.
ಪೊಲೀಸ್ ಠಾಣೆಗಳಲ್ಲಿ ಮಾಲೀಕರಿಲ್ಲದೆ ಉಳಿದ ವಾಹನಗಳ ನೈಜ ಮಾಲೀಕರನ್ನು ಪತ್ತೆಹಚ್ಚುವ ತಂತ್ರಜ್ಞಾನ ಆಧಾರಿತ ಯೋಜನೆಗಾಗಿ ಇವರು ರಾಷ್ಟ್ರೀಯ ಮಟ್ಟದ ಮಾನ್ಯತೆ ಪಡೆದಿದ್ದಾರೆ.
ಮಂಡ್ಯ ಮಿರಾಕಲ್ ಎಂದೇ ಹೆಸರಾದ, ಮಂಡ್ಯದಲ್ಲಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಅನಾಥ ಅಥವಾ ಕ್ಲೇಮ್ ಮಾಡದ ವಾಹನಗಳ ನಿರ್ವಹಣೆ ಮತ್ತು ಮಾಲೀಕರ ಪತ್ತೆಗೆ ಪರಿಣಾಮಕಾರಿ ಡೇಟಾಬೇಸ್ ವ್ಯವಸ್ಥೆಯನ್ನು ರೂಪಿಸುವ ಕಾರ್ಯದಲ್ಲಿ ಗಮನಾರ್ಹ ಸಾಧನೆ ಮಾಡಿದ ಖ್ಯಾತಿ ಇವರದು.
SVP National Police Academy ಗೌರವ, 2021ರಲ್ಲಿ Director’s Commendation and Insignia ಗೌರವ ಪಡೆದಿದ್ದಾರೆ.
ಬೊರಸೆ ಉತ್ತಮ ಲೇಖಕರು ಹೌದು, ಬರವಣಿಗೆ ಅವರ ಇಷ್ಟದ ಕಾಯಕ
ಬೊರಸೆ ಅವರು, Blockchain Technology, Cryptocurrencies, Road Safety ಮುಂತಾದ ವಿಷಯಗಳಲ್ಲಿ ಆಸಕ್ತಿ ಹೊಂದಿದ್ದು, ಪೊಲೀಸ್ ಸಿಬ್ಬಂದಿಗೆ ಸಂಬಂಧಿಸಿದ ತಂತ್ರಜ್ಞಾನ ವಿಷಯಗಳ ಕುರಿತು ಲೇಖನಗಳನ್ನು ಪ್ರಕಟಿಸಿದ್ದಾರೆ. ರಸ್ತೆ ಸುರಕ್ಷತೆ ಕುರಿತು ಬ್ಲಾಗನ್ನೂ ನಿರ್ವಹಿಸಿದ್ದಾರೆ.
ಇಂತಹ ಅಧಿಕಾರಿ ಬೆಳಗಾವಿಯಲ್ಲಿ ದೋ ನಂಬರ ದಂಧೆಯನ್ನು ಬಗ್ಗು ಬಡಿದು, ಹುಬ್ಬಳ್ಳಿ ಧಾರವಾಡ ಅವಳಿ ನಗರಕ್ಕೆ ನೂತನ ಪೊಲೀಸ್ ಕಮಿಷನರ್ ಆಗಿ ಬಂದಿದ್ದಾರೆ.
ಅವರ ಸೇವಾವಧಿಯಲ್ಲಿ ಹುಬ್ಬಳ್ಳಿ ಧಾರವಾಡದಲ್ಲಿ ಶಾಂತಿ ನೆಲೆಸಲಿ, ದೋ ನಂಬರ ದಂಧೆ ಸೇರಿದಂತೆ ಗಾಂಜಾ ಮುಕ್ತವಾಗಲಿ ಅನ್ನೋದು ಎಲ್ಲರ ಬಯಕೆ.
ಮುಖ್ಯವಾಗಿ ಮಂತ್ರಿಗಳು, ಶಾಸಕರು, ನೂತನ ಪೊಲೀಸ್ ಕಮಿಸನರ್ ಬೊರಸೆ ಅವರ ಕೈಕಟ್ಟಿ ಹಾಕದಿರಲಿ. ಹೀಗಾದಾಗ ಬಹುಷಃ ಅವಳಿ ನಗರ ಸುರಕ್ಷತೆ, ಶಾಂತತೆಗೆ ಹೆಸರಾಗಬಹುದು.





