ಕಬ್ಬು ಬೆಳೆಗೆ ಬೆಂಬಲ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರೈತರು ಮತ್ತೆ ಪ್ರತಿಭಟನೆಗೆ ಮುಂದಾಗಿದ್ದಾರೆ.
ಚೂನಪ್ಪ ಪೂಜಾರಿ ಹಾಗೂ ಶಶಿಕಾಂತ ಗೂರುಜಿ ನೇತೃತ್ವದ ಸಂಘಟನೆ ಇಂದು ರಾಷ್ಟ್ರೀಯ ಹೆದ್ದಾರಿ ಬಂದ್ ಗೆ ಕರೆ ಕೊಟ್ಟಿದ್ದು, ಮತ್ತೆ ರಸ್ತೆ ಸಂಪರ್ಕ ಅಸ್ತವ್ಯಸ್ತಗೊಳ್ಳಲಿದೆ.
ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ, ಸುಗಮ ವಾಹನ ಸಂಚಾರ ಹಾಗೂ ತುರ್ತು ಸೇವೆಗಳ ಕಾರ್ಯ ನಿರ್ವಹಣೆಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಧಾರವಾಡ ಜಿಲ್ಲಾಡಳಿತ ನಿಷೇದಾಜ್ಞೆ ಜಾರಿ ಮಾಡಿದೆ.
ಧಾರವಾಡ ಜಿಲ್ಲಾಧಿಕಾರಿ ಆರ್ ಸ್ನೇಹಲ್, ರಾಷ್ಟ್ರೀಯ ಹೆದ್ದಾರಿಗಳಾದ, ಪುನಾ ಬೆಂಗಳೂರು, ಹುಬ್ಬಳ್ಳಿ ವಿಜಯಪುರ, ಹುಬ್ಬಳ್ಳಿ ಬಳ್ಳಾರಿ ಹೆದ್ದಾರಿಗಳಲ್ಲಿ ಹಾಗೂ ಅದರ ಸುತ್ತಮುತ್ತಲಿನ 5 ಕೀ ಮಿ ವ್ಯಾಪ್ತಿಯಲ್ಲಿ ನಿಷೇದಾಜ್ಞೆ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ.
ಈ ನಿಷೇದಾಜ್ಞೆ ಆದೇಶವು, ಶಾಂತಿಯುತವಾಗಿ ಮತ್ತು ಕಾನೂನು ಬದ್ದವಾಗಿ ತಮ್ಮ ಬೇಡಿಕೆಗಳನ್ನು ವ್ಯಕ್ತಪಡಿಸುವ ಹಕ್ಕನ್ನು ಸಂಪೂರ್ಣವಾಗಿ ನಿರ್ಬಂಧಿಸುವ ಉದ್ದೇಶವನ್ನು ಹೊಂದಿಲ್ಲವೆಂದು ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಾರ್ವಜನಿಕ ಸಂಚಾರಕ್ಕೆ ಅಡಚಣೆ ಉಂಟಾಗದಂತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುವ ಉದ್ದೇಶದಿಂದ ಮಾತ್ರ ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.




