ಧಾರವಾಡ: ಶಾಸಕ ವಿನಯ ಕುಲಕರ್ಣಿ ಹಾಗೂ ಅವರ ಕುಟುಂಬದ ವಿಷಯ ಬಂದಾಗ ಕೆಲವು ಮಾಧ್ಯಮಗಳು ವಾಸ್ತವಾಂಶಗಳನ್ನು ಪರಿಶೀಲಿಸದೆ ವರದಿ ಮಾಡುತ್ತಿವೆ. ಇದರಿಂದ ಕುಟುಂಬದ ತೇಜೋವಧೆಯಾಗುತ್ತಿದೆ ಎಂದು ವಿದ್ಯಾರ್ಥಿ ಕಾಂಗ್ರೆಸ್ ಮುಖಂಡ ಎಂ.ಕೆ. ನಿಪ್ಪಾಣಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೈಸೂರು ದಸರಾ ಗಜಪಡೆಯನ್ನು ವೀಕ್ಷಿಸಿದ ಶಾಸಕ ವಿನಯ ಕುಲಕರ್ಣಿ ಅವರ ಪುತ್ರಿ ವೈಶಾಲಿ ವಿನಯ ಕುಲಕರ್ಣಿ ಅವರ ಫೋಟೋ ಕುರಿತಂತೆ ಕೆಲವು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳಿಗೆ ಪ್ರತಿಕ್ರಿಯಿಸಿರುವ ಅವರು, ಶಾಸಕರ ಮಕ್ಕಳಿಗೆ ಒಂದು ನಿಯಮ, ಸಾಮಾನ್ಯರ ಮಕ್ಕಳಿಗೆ ಮತ್ತೊಂದು ನಿಯಮವೇ? ಎಂಬ ಪ್ರಶ್ನೆ ಮುಂದಿಟ್ಟು ಸುದ್ದಿ ಮಾಡುವುದು ಎಷ್ಟು ಸಮಂಜಸ? ಎಂದು ಪ್ರಶ್ನಿಸಿದ್ದಾರೆ.
ವೈಶಾಲಿ ವಿನಯ ಕುಲಕರ್ಣಿ ಅವರು ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯೆಯಾಗಿದ್ದು, ತಮ್ಮ ಜವಾಬ್ದಾರಿಯ ಭಾಗವಾಗಿ ಗಜಪಡೆಯನ್ನು ವೀಕ್ಷಿಸಲು ತೆರಳಿದ್ದಾರೆ. ಇದರಲ್ಲಿ ತಪ್ಪೇನಿದೆ? ಯಾವುದೇ ವಿಷಯದ ಕುರಿತು ಸುದ್ದಿ ಪ್ರಕಟಿಸುವ ಮುನ್ನ ಅದರ ಹಿನ್ನೆಲೆ ಹಾಗೂ ವಾಸ್ತವಾಂಶಗಳನ್ನು ಅರಿತುಕೊಳ್ಳುವುದು ಮಾಧ್ಯಮಗಳ ಜವಾಬ್ದಾರಿಯಲ್ಲವೇ ಎಂದು ನಿಪ್ಪಾಣಿ ಪ್ರಶ್ನಿಸಿದ್ದಾರೆ.
ಪ್ರಾಣಿ ದತ್ತು ಸ್ವೀಕಾರದ ಕಾರ್ಯಕ್ಕೆ ಮನ್ನಣೆ ಏಕಿಲ್ಲ?
ಕಳೆದ ತಿಂಗಳು ತಮ್ಮ ಜನ್ಮದಿನದ ಅಂಗವಾಗಿ ವೈಶಾಲಿ ವಿನಯ ಕುಲಕರ್ಣಿ ಅವರು ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ಪ್ರಾಣಿ ದತ್ತು ಯೋಜನೆಯಡಿ ₹3 ಲಕ್ಷ ಪಾವತಿಸಿ, ‘ಐಶ್ವರ್ಯ‘ ಹೆಸರಿನ ಭಾರತೀಯ ಆನೆಯನ್ನು ದತ್ತು ಪಡೆದಿದ್ದಾರೆ. ಪ್ರಾಣಿಗಳ ಸಂರಕ್ಷಣೆಗೆ ನೆರವಾಗುವ ಇಂತಹ ಕಾರ್ಯಗಳು ಮೆಚ್ಚುಗೆಗೆ ಪಾತ್ರವಾಗಬೇಕಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಒಳ್ಳೆಯ ಕಾರ್ಯಗಳಿಗೆ ಪ್ರಚಾರವಿಲ್ಲ, ವಿವಾದಗಳಿಗೆ ಮಾತ್ರ ಆದ್ಯತೆಯೇ?
ವಿನಯ ಕುಲಕರ್ಣಿ ಅಥವಾ ಅವರ ಕುಟುಂಬದವರು ಕೈಗೊಳ್ಳುವ ಸಕಾರಾತ್ಮಕ ಕಾರ್ಯಗಳಿಗೆ ಸೂಕ್ತ ಮನ್ನಣೆ ದೊರೆಯುತ್ತಿಲ್ಲ. ಬದಲಾಗಿ, ಅವರನ್ನು ಟೀಕಿಸುವ ಹಾಗೂ ತೇಜೋವಧೆ ಮಾಡುವ ರೀತಿಯಲ್ಲಿ ಕೆಲವು ವರದಿಗಳು ಪ್ರಕಟವಾಗುತ್ತಿವೆ ಎಂದು ಎಂ.ಕೆ. ನಿಪ್ಪಾಣಿ ಆರೋಪಿಸಿದ್ದಾರೆ.





