ಶಕ್ತಿ ಯೋಜನೆ ಜಾರಿಯಾದ ದಿನ ಅತ್ಯಂತ ಸಂತಸದಿಂದ ಧಾರವಾಡ ಬಸ್ ನಿಲ್ದಾಣದಲ್ಲಿ ಸರ್ಕಾರಿ ಬಸ್ಸಿನ ಮೆಟ್ಟಿಲುಗಳಿಗೆ ನಮಸ್ಕರಿಸಿ ಪ್ರಯಾಣ ಬೆಳೆಸಿದ ಬೆಳಗಾವಿ ಜಿಲ್ಲೆಯ ಸಂಗೊಳ್ಳಿಯ ಸಂಗವ್ವಳನ್ನು ನೋಡಿ ಮುಖ್ಯಮಂತ್ರಿ ಅಚ್ಚರಿಗೊಂಡರು.

ಸಿದ್ದರಾಮಯ್ಯ ಅವರು ಇಂದು ಕಲರ್ಸ್ ಕನ್ನಡದ ಅನುಬಂಧ ಅವಾರ್ಡ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆ ಸಮಾರಂಭಕ್ಕೆ ಸಂಗವ್ವ ಬಂದಿದ್ದು ಮುಖ್ಯಮಂತ್ರಿಗಳಿಗೆ ಗೊತ್ತಿರಲಿಲ್ಲ. ಕಾರ್ಯಕ್ರಮ ನಡೆಯುವ ಸಂದರ್ಭದಲ್ಲಿಯೇ ಮುಖ್ಯಮಂತ್ರಿಗಳ ಎದುರು ಸಂಗವ್ವ ಬಂದು ನಿಂತಾಗ ಸಿದ್ದರಾಮಯ್ಯ ಅವರ ಖುಷಿಗೆ ಪಾರವೇ ಇರಲಿಲ್ಲ.

ಮಹಿಳೆಯರ ಸಬಲೀಕರಣಕ್ಕೆ ಬೆಂಬಲವಾಗಿ ನಿಲ್ಲಬೇಕು ಎನ್ನುವ ಕಾಳಜಿಯಿಂದ ಜಾರಿಗೆ ತಂದಿರುವ ಶಕ್ತಿ ಯೋಜನೆಯ ಮೊದಲ ದಿನವೇ ಸಂಗವ್ವ ಅವರಿಂದ ದೊರೆತ ಪ್ರತಿಕ್ರಿಯೆ ಕಂಡು ಕಾಂಗ್ರೇಸ್ ಸರ್ಕಾರದ ಯೋಜನೆ ನೂರಕ್ಕೆ ನೂರರಷ್ಟು ಯಶಸ್ವಿಯಾಗಲಿದೆ ಎಂಬ ಭರವಸೆ ನನ್ನಲ್ಲಿ ಮೂಡಿತ್ತು ಎಂದು ಸಿದ್ದರಾಮಯ್ಯನವರು ಹೇಳಿದರು. ಅಂದ ಹಾಗೇ ಧಾರವಾಡದ ಬಸ್ ನಿಲ್ದಾಣದಲ್ಲಿ ಸೆರೆ ಹಿಡಿದಿದ್ದು ಧಾರವಾಡದ ಖ್ಯಾತ ಛಾಯಾಗ್ರಾಹಕ ಕೇದಾರಸ್ವಾಮಿ ಹಾಗೂ ರಾಮಚಂದ್ರ ಕುಲಕರ್ಣಿ ಅವರು.





