ಬಿಜೆಪಿ ಕಾರ್ಯಕರ್ತನಿಗೆ ಅನಾವಶ್ಯಕವಾಗಿ ಹೊಡೆದಿದ್ದಾರೆ ಎಂದು ಸಾರ್ವಜನಿಕವಾಗಿಯೇ ಧಾರವಾಡ ಶಹರ ಠಾಣೆಯ ಇನ್ಸಪೆಕ್ಟರ ಮೇಲೆ ಕೇಂದ್ರ ಸಚಿವ ಪ್ರಲ್ಲಾದ ಜೋಶಿ ಆವಾಜ್ ಹಾಕಿದ ವಿಡಿಯೋ ವೈರಲ್ ಆಗಿದೆ. ಧಾರವಾಡದ ಗೊಲ್ಲರ ಕಾಲೋನಿಯ ರವಿ ಗೊಲ್ಲರ ಎಂಬಾತನ ಮೇಲೆ ಧಾರವಾಡ ಶಹರ ಠಾಣೆ ಇನ್ಸಪೆಕ್ಟರ್ ಕಾಡದೇವರಮಠ ಠಾಣೆಯಲ್ಲಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ, ಗೊಲ್ಲರ ಕಾಲೋನಿಯ ಬಿಜೆಪಿ ಕಾರ್ಯಕರ್ತರು ಪ್ರಲ್ಲಾದ ಜೋಶಿಯವರನ್ನು ಭೇಟಿ ಮಾಡಿದ್ದರು. ಹುಬ್ಬಳ್ಳಿ ಮನೆಯಲ್ಲಿದ್ದ ಪ್ರಲ್ಲಾದ ಜೋಶಿ, ಇನ್ಸಪೆಕ್ಟರ ಕಾಡದೇವರಮಠರ ಮೇಲೆ ಆವಾಜ್ ಹಾಕಿದ ಘಟನೆ ನಡೆದಿದೆ.
ಯಾವ ಆಧಾರದ ಮೇಲೆ ನಮ್ಮ ಕಾರ್ಯಕರ್ತರಿಗೆ ಹೊಡೆದಿದ್ದೀರಿ, ಠಾಣೆಯಲ್ಲಿ ಹೊಡೆಯುವ ಅಧಿಕಾರ ನಿಮಗೆ ಕೊಟ್ಟವರಾರು, ಕಾನೂನಿನಲ್ಲಿ ಇದಕ್ಕೆ ಅವಕಾಶ ಇದೆಯೇ. ನೀವು ಡ್ಯೂಟಿ ಮೇಲೆ ಇದ್ದೀರಿ, ನಾವು ಇಲ್ಲಿ ನಿಮಗೆ ಹೊಡೆದರೆ, ನಿಮಗೆ ನಾನು ನಾಲ್ಕು ಗುದ್ದಿದರೆ, ಅದು ಸರಿನಾ. ಇದನ್ನು ಕಾನೂನು ಹೇಳತ್ತಾ ಎಂದು ಪ್ರಶ್ನಿಸಿದರು. ಅಷ್ಟಕ್ಕೂ ಇನ್ಸಪೆಕ್ಟರ ಅವರು ಹೊಡೆದಿದ್ದಾರೆ ಎನ್ನಲಾದ ರವಿ ಗೊಲ್ಲರ ಎಂಬಾತ, ಶಹರ ಠಾಣೆಯಲ್ಲಿ ರೌಡಿ ಶೀಟರ ಪಟ್ಟಿಯಲ್ಲಿ ಇದ್ದಾನೆ ಎನ್ನಲಾಗಿದೆ.
ಇಸ್ಪೇಟ್ ಆಡಿಸೋದು, ಮುಂತಾದ ಕಾನೂನು ಬಾಹಿರ ಚಟುವಟಿಕೆ ಇದ್ದರೆ ಅಂತಹದಕ್ಕೆ ನಾನು ಸಪೋರ್ಟ್ ಮಾಡಲ್ಲ ಎಂದ ಪ್ರಲ್ಲಾದ ಜೋಶಿ, ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುದನ್ನು ಬಿಟ್ಟು ಹೊಡೆದಿದ್ದಿರಿ ಅದು ಸರಿಯಲ್ಲ ಅಂತ ಆಕ್ರೋಶ ಹೊರಹಾಕಿದರು. ಕಮಿಷನರ್ ಕಚೇರಿ ಎದುರು ನಾನೇ ಪ್ರತಿಭಟನೆ ನಡೆಸುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಕಾರ್ಯಕರ್ತರು ಅನ್ನೋ ಉದ್ದೇಶಕ್ಕೆ ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ಮಾಡುತ್ತಿದ್ದಿರಿ ಎಂದು ಆರೋಪ ಮಾಡಿದರು.
ಪ್ರಲ್ಲಾದ ಜೋಶಿಯವರು ಇನ್ಸಪೆಕ್ಟರಗೆ ಆವಾಜ ಹಾಕಿದ ವಿಡಿಯೋ ವೈರಲ್ ಆಗಿದೆ. ಕೇಂದ್ರ ಸಚಿವರು ಹೀಗೆ ಸಾರ್ವಜನಿಕವಾಗಿ ಇನ್ಸಪೆಕ್ಟರ ಜೊತೆ ನಡೆದುಕೊಂಡಿದ್ದು ತಪ್ಪು ಎಂದು ಸಾರ್ವಜನಿಕರು ಮಾತಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ಇಲಾಖೆಯಲ್ಲಿಯ ಪೊಲೀಸ್ ಅಧಿಕಾರಿಗಳು, ಕೇಂದ್ರ ಸಚಿವರ ನಡುವಳಿಕೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಕಾನೂನು ಸುವ್ಯವಸ್ಥೆ ಮತ್ತು ಅಪರಾಧ ತಡೆಗಟ್ಟೋದು ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ.





