ಕಳೆದ ನಾಲ್ಕೈದು ದಿನಗಳಿಂದ ಧಾರವಾಡದಲ್ಲಿ ಒಬ್ಬ ವಿದ್ಯಾರ್ಥಿಯ ಆತ್ಮಹತ್ಯೆಯ ಹಿನ್ನೆಲೆಯಲ್ಲಿ, ರೋಚಕ ಮಾಹಿತಿಗಳು ಹೊರಬೀಳುತ್ತಿವೆ.
ಧಾರವಾಡ ಗಾಂಜಾ ಮುಕ್ತವಾಗಬೇಕು ಎಂದು ಉದ್ದುದ್ದ ಭಾಷಣ ಬಿಗಿಯುವ ರಾಜಕಾರಣಿಗಳು, ಗಾಂಜಾ ಮಾಫಿಯಾ ಕೈಗೆ ದಾಳವಾಗಿ ಸಿಕ್ರಾ ಅನ್ನೋ ಅನುಮಾನ ಮೂಡಿದೆ.
ವಿದ್ಯಾಗಿರಿ ಪೊಲೀಸರು, ಗಾಂಜಾ ಸೇವನೆ ಮಾಡುವವರನ್ನು ತಪಾಸಣೆ ಮಾಡುವ ಸಂದರ್ಭದಲ್ಲಿ ಹಲವರ ವಿಚಾರಣೆ ನಡೆಸಿ, ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದರು.
ಹಾಗೇನೇ, ಆದಿತ್ಯ ಮ್ಯಾಗೇರಿಯ ವೈದ್ಯಕೀಯ ತಪಾಸಣೆ ಸಹ ಮಾಡಲಾಗಿತ್ತು. ವೈದ್ಯಕೀಯ ಪರೀಕ್ಷೆಯಲ್ಲಿ ಆದಿತ್ಯ , ಗಾಂಜಾ ಸೇವನೆ ಮಾಡಿದ್ದರ ಬಗ್ಗೆ ದೃಢಪಟ್ಟಿರಲಿಲ್ಲ.
ಆದರೂ ಪೊಲೀಸರು, ಎರಡು ಸಾವಿರ ರೂಪಾಯಿ ಕೇಳಿದರು ಎಂದು ಆದಿತ್ಯ ತನಗೆ ಹೇಳಿದ್ದಾಗಿ, ಆತನ ತಾಯಿ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾಳೆ.
ಆ ಬಗ್ಗೆ ಸಮಗ್ರ ತನಿಖೆಯಾಗಲಿ ತಕರಾರಿಲ್ಲ. ಆರೋಪ ಸಾಬೀತಾದ್ರೆ, ತಪ್ಪು ಮಾಡಿದವರನ್ನು ಸೇವೆಯಿಂದಲೇ ವಜಾ ಮಾಡಲಿ. ಆದರೆ ಆದಿತ್ಯನ ಸಾವಿನ ನಂತರ ನಡೆದ ಪ್ರತಿಭಟನೆ ಇತ್ತಲ್ಲ. ಅದರಲ್ಲಿ ಒಬ್ಬ ಗಾಂಜಾ ಪೆಡ್ಲರ್ ಸಹ ಇದ್ದಿದ್ದು, ಗಾಂಜಾ ಮಾಫಿಯಾ ಕೈವಾಡಕ್ಕೆ ಸಾಕ್ಷಿ.
ಆದಿತ್ಯನ ಸಾವಿಗೆ ಪೊಲೀಸರೇ ಕಾರಣ ಎಂದು ಪೊಲೀಸರ ಮೇಲೆ ಆರೋಪ ಹೊರಿಸಿದ್ರೆ ಸಾಕು, ಮುಂದೆ ಪೊಲೀಸರು ನಮ್ಮನ್ನು ಮುಟ್ಟೋಕು ಹೆದರ್ತಾರೆ ಅನ್ನೋದು ಮಾಫಿಯಾದವರು ಮಾಡಿದ ಐಡಿಯಾ.
ಇದಕ್ಕೆ ಪುಷ್ಟಿ ನೀಡುವ ಒಂದಷ್ಟು ವಿಡಿಯೋಗಳು ಕರ್ನಾಟಕ ಫೈಲ್ಸ್ ಗೆ ಸಿಕ್ಕಿವೆ.
ದೊಡ್ಡ ಸಂಘಟನೆ ಹೊಂದಿದ ಬಿಜೆಪಿ, ಈ ವಿಷಯದಲ್ಲಿ ದೊಡ್ಡ ಹೋರಾಟ ಮಾಡುವ ಮುನ್ನ, ಗಾಂಜಾ ಮುಕ್ತ ಧಾರವಾಡ ಎಂಬ ಅಭಿಯಾನ ಆರಂಭ ಮಾಡಲಿ.
ಆದಿತ್ಯನ ಸಾವಿಗೆ ನ್ಯಾಯ ಸಿಗಲಿ, ಹಾಗೇನೇ ಗಾಂಜಾ ಮುಕ್ತ ಧಾರವಾಡ ಮಾಡಲು, ಬಿಜೆಪಿ ಪೊಲೀಸರ ಜೊತೆ ಕೈ ಜೋಡಿಸಲಿ.
ಸದ್ಯಕ್ಕಂತೂ ಆದಿತ್ಯನ ಆತ್ಮಹತ್ಯೆ ಪ್ರಕರಣದಲ್ಲಿ, ಮಾಡದ ತಪ್ಪಿಗೆ ದಕ್ಷ ಪೊಲೀಸ್ ಇನ್ಸ್‌ಪೆಕ್ಟರ್ ರಫೀಕ್ ತಹಸೀಲ್ದಾರ್ ಹಾಗೂ ಮೂವರು ಪೊಲೀಸರ ತಲೆದಂಡವಾಗಿದೆ.
ಪೊಲೀಸರ ತಲೆದಂಡ, ಗಾಂಜಾ ಮಾಫಿಯಾದವರ ಮರ್ಯಾದೆ, ಗೌರವ, ಆತ್ಮಬಲ ಹೆಚ್ಚಿಸಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ, ಪೂಲೀಸರು ಕೆಲಸ ಮಾಡೋದಕ್ಕೂ ಹಿಂದೆ ಮುಂದೆ ನೋಡಬಹುದು.
ಮುಂದಿನ ದಿನಗಳಲ್ಲಿ, ಹುಬ್ಬಳ್ಳಿ ಧಾರವಾಡ ನಗರಗಳನ್ನು ಅಪರಾಧ ಜಗತ್ತು ಆಳಬಹುದು, ಹಾಗೇ ಅಪರಾಧ ಜಗತ್ತು ಆಳುವ ಸ್ಥಿತಿ ಬರಲು ರಾಜಕೀಯ ಪಕ್ಷಗಳು ಮತ್ತು ನಾಯಕರು ಕಾರಣವಾಗದಿರಲಿ.





